ನವದೆಹಲಿ: ಮಗಳ ಮರ್ಯಾದೆಗೇಡು ಹತ್ಯೆ ಮಾಡಿದ್ದ ಹೊಸಪೇಟೆಯ ಗಂಡಿ ದೊಡ್ಡಬಸಪ್ಪ ಅಲಿಯಾಸ್ ಗಾಂಧಿ ಬಸವರ ಎಂಬಾತನಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಗಳು ಶಿಲ್ಪಾ, ನಾಯ್ಕ ಸಮುದಾಯಕ್ಕೆ ಸೇರಿದ ಯುವಕನನ್ನು ಮದುವೆಯಾಗಿದ್ದರು. ಇದರಿಂದ ಕೆರಳಿದ ಲಿಂಗಾಯತ ಸಮುದಾಯದ ಬಸವರ ಒಂಬತ್ತು ತಿಂಗಳು ಗರ್ಭಿಣಿಯಾಗಿದ್ದ ಮಗಳನ್ನು ಹೊಸಪೇಟೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದ.
ಅಪರಾಧಿ ಬಸವರನಿಗೆ ಹೈಕೋರ್ಟ್ ಹತ್ತು ವರ್ಷ ಶಿಕ್ಷೆ ವಿಧಿಸಿತ್ತು. ಆದರೆ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರ ಪೀಠ ಹತ್ತು ವರ್ಷ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಏರಿಸಿದೆ. ಶಿಲ್ಪಾ ಅವರ ಅತ್ತೆಯ ಹೇಳಿಕೆ ಮತ್ತು ಇತರ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಈ ಆದೇಶ ನೀಡಲಾಗಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಸವರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ‘ಆತ ಮಗಳನ್ನು ಕೊಲ್ಲುವ ಉದ್ದೇಶ ಹೊಂದಿದ್ದ ಎಂಬುದರಲ್ಲಿ ಅನುಮಾನವೇ ಇಲ್ಲ. ಶಿಲ್ಪಾಳನ್ನು ಬೇರೆಯವರು ಕೊಂದಿರುವ ಯಾವ ಸಾಧ್ಯತೆಯೂ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಬಸವರ ಕೊಲ್ಲುವ ಉದ್ದೇಶ ಹೊಂದಿರಲಿಲ್ಲ ಎಂಬ ನಿರ್ಧಾರಕ್ಕೆ ಹೈಕೋರ್ಟ್ ಬಂದಿತ್ತು. ಹಾಗಾಗಿ ಆತನಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿತ್ತು. ‘ಕೆಳ ಜಾತಿಯ ಯುವಕನನ್ನು ಮಗಳು ಮದುವೆಯಾಗಿದ್ದರಿಂದ ಬಸವರ ಹತಾಶನಾಗಿದ್ದ. ಈ ಹತಾಶೆಯೇ ಸ್ಫೋಟಗೊಂಡು ಆತ ಮಗಳ ಮೇಲೆ ಹಲ್ಲೆ ನಡೆಸಿದ್ದ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಬಸವರ ತಪ್ಪಿತಸ್ಥ ಎಂದು ಹೈಕೋರ್ಟ್ ಗುರುತಿಸಿದೆ. ಆದರೆ ಈ ಪೀಠ ಅದನ್ನು ಕೊಲೆ ಎಂದೇ ಪರಿಗಣಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಕೊಲೆಯಾದ ಶಿಲ್ಪಾಳ ಅತ್ತೆಯ ಹೇಳಿಕೆಯನ್ನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯ ಬಸವರನನ್ನು ಖುಲಾಸೆಗೊಳಿಸಿತ್ತು.
ಮಗಳ ಅಂತರ್ಜಾತಿ ಮದುವೆ ಬಸವರನ ಅತೃಪ್ತಿಗೆ ಕಾರಣವಾಗಿತ್ತು ಎಂಬುದರ ಆಧಾರದಲ್ಲಿ ಆತ ಕೊಲೆ ಮಾಡುವ ಉದ್ದೇಶ ಹೊಂದಿದ್ದ ಎಂದು ಹೇಳಲಾಗದು ಎಂದು ಆತನ ಪರ ವಕೀಲೆ ಕಿರಣ್ ಸೂರಿ ವಾದಿಸಿದ್ದರು. ಆದರೆ ಇದು ಅತ್ಯಂತ ಸ್ಪಷ್ಟವಾಗಿ ಮರ್ಯಾದೆಗೇಡು ಹತ್ಯೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದತ್ತ ಕಾಮತ್ ವಾದಿಸಿದ್ದರು.
ಶೌಚಾಲಯದಲ್ಲಿ ಕೊಲೆ: 2003ರ ಅಕ್ಟೋಬರ್ 3ರಂದು ಈ ಕೊಲೆ ನಡೆದಿತ್ತು. ಹೊಸಪೇಟೆಯ ಸಾರ್ವಜನಿಕ ಶೌಚಾಲಯದಲ್ಲಿ ಮಗಳು ಶಿಲ್ಪಾ ಅವರನ್ನು ಬಸವರ ಕೊಲೆ ಮಾಡಿದ್ದ. ಬಸವರ ಶೌಚಾಲಯಕ್ಕೆ ನುಗ್ಗಿದ ನಂತರ ಒಳಗಿನಿಂದ ‘ಅಪ್ಪಾ ಬೇಡ ಅಪ್ಪಾ’ ಎಂದು ಶಿಲ್ಪಾ ಕೂಗಿಕೊಂಡದ್ದನ್ನು ತಾನು ಕೇಳಿಸಿಕೊಂಡಿದ್ದೇನೆ ಎಂದು ಆಗ ಅಲ್ಲಿಯೇ ಇದ್ದ ಶಿಲ್ಪಾಳ ಅತ್ತೆ ಹೇಳಿಕೆ ನೀಡಿದ್ದಾರೆ.
ನಂತರ ನೆತ್ತರಿನಲ್ಲಿ ಮುಳುಗಿದ್ದ ಕುಡುಗೋಲಿನೊಂದಿಗೆ ಬಸವರ ಶೌಚಾಲಯದಿಂದ ಹೊರಗೆ ಬಂದಿದ್ದ. ಕುಡುಗೋಲನ್ನು ಹತ್ತಿರದ ಸೆಗಣಿ ಗುಂಡಿಗೆ ಎಸೆದಿದ್ದ ಎಂಬುದನ್ನು ಅವರು ವಿವರಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿಯೇ ಮೇಲ್ಮನವಿಯನ್ನು ಹಿಂದಕ್ಕೆ ಪಡೆಯಲು ಬಸವರ ಬಯಸಿದ್ದ. ಆದರೆ ಅದಕ್ಕೆ ಅವಕಾಶ ಕೊಡದ ಸುಪ್ರೀಂ ಕೋರ್ಟ್, ಶಿಕ್ಷೆ ಹೆಚ್ಚಿಸುವ ಬಗ್ಗೆ ಆತನ ಅಭಿಪ್ರಾಯ ತಿಳಿಸಲು ಸೂಚಿಸಿತ್ತು.