ADVERTISEMENT

ಮಹಾರಾಷ್ಟ್ರ: ಫಡ್ನವೀಸ್ ಮುಂದಿನ ಸಿ.ಎಂ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 13:09 IST
Last Updated 28 ಅಕ್ಟೋಬರ್ 2014, 13:09 IST

ಮುಂಬೈ (ಪಿಟಿಐ/ಐಎಎನ್‌ಎಸ್‌): ನಿರೀಕ್ಷೆಯಂತೆ ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿರುವ ಮೋದಿ ಅವರ ಆಪ್ತ ದೇವೇಂದ್ರ ಫಡ್ನವೀಸ್‌ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಹಾರಾಷ್ಟ್ರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ.

ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಾಗ್ಪುರ ಮೂಲದ 44 ವರ್ಷದ ಫಡ್ನವೀಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಫಡ್ನವೀಸ್ ಅವರ ಹೆಸರನ್ನು ರಾಜ್ಯ ಬಿಜೆಪಿ ಮುಖಂಡ ಏಕನಾಥ್ ಖಾದ್ಸೆ ಪ್ರಸ್ತಾಪಿಸಿದರು. ಬಳಿಕ ವಿನೋದ್ ತಾವಡೆ, ಪಕ್ಷದ ಕೋರ್‌ ಸಮಿತಿ ಸದಸ್ಯರಾದ ಸುದೀರ್‌ ಮುಂಗಂಟಿವಾರ್ ಹಾಗೂ ಪಂಕಜಾ ಮುಂಡೆ ಅವರು ಅನುಮೋದಿಸಿದರು.

ADVERTISEMENT

ಪಕ್ಷದ ಕೇಂದ್ರೀಯ ವೀಕ್ಷಕರಾಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿಯೂ ಆಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಪಿ.ನಡ್ಡಾ ಅವರು ಉಪಸ್ಥಿತರಿದ್ದರು.

ಸಂಜೆ 6.30ರ ವೇಳೆಗೆ ಫಡ್ನವೀಸ್‌ ಅವರು ರಾಜ್ಯ ಬಿಜೆಪಿ ಕೋರ್‌ ಸಮಿತಿಯ ಕೆಲ ಸದಸ್ಯರೊಂದಿಗೆ ಸರ್ಕಾರ ರಚನೆಯ ಹಕ್ಕು ಮಂಡನೆಗಾಗಿ ರಾಜ್ಯಪಾಲರಾದ ಸಿ.ವಿದ್ಯಾಸಾಗರ ರಾವ್‌ ಅವರನ್ನು ರಾಜಭವನದಲ್ಲಿ ಭೇಟಿ ಮಾಡಲಿದ್ದಾರೆ.

ಅಕ್ಟೋಬರ್ 31ರಂದು ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭವು ನಗರದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಅವರ ಸಂಪುಟದ ಹಲವು ಸದ್ಯಸರು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತ ಇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.