ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಬೇಕು ಎಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಬೆನ್ನಲ್ಲೇ ತಿರುವಾಂಕೂರ್ ದೇವಸ್ವಂ ಮಂಡಳಿ ಮುಖ್ಯಸ್ಥರ ಹೇಳಿಕೆಯೊಂದು ವಿವಾದಕ್ಕೀಡಾಗಿದೆ.
ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡಿದರೆ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ. ಹೀಗಾದರೆ ಶಬರಿಮಲೆ ಥಾಯ್ಲೆಂಡ್ ನಂತೆ ಸೆಕ್ಸ್ ಟೂರಿಸಂ ಕೇಂದ್ರವಾಗಿ ಮಾರ್ಪಡುತ್ತದೆ ಎಂದು ತಿರುವಾಂಕೂರ್ ದೇವಸ್ವಂ ಮಂಡಳಿ ಮುಖ್ಯಸ್ಥ ಪ್ರಾಯರ್ ಗೋಪಾಲಕೃಷ್ಣನ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಿದರೆ ಅವರಿಗೆ ಭದ್ರತೆ ಕಲ್ಪಿಸುತ್ತೇವೆ ಎಂಬ ಭರವಸೆ ನೀಡಲಾಗುವುದಿಲ್ಲ. ಶಬರಿಮಲೆಯನ್ನು ನಾವು ಥಾಯ್ಲೆಂಡ್‍ನಂತೆ ಸೆಕ್ಸ್ ಟೂರಿಸಂ ಕೇಂದ್ರವನ್ನಾಗಿ ಮಾಡಲು ಇಚ್ಛಿಸುವುದಿಲ್ಲ. ಒಂದು ವೇಳೆ ಮಹಿಳೆಯರು ದೇಗುಲ ಪ್ರವೇಶಿಸಲಿ ಎಂದು ಕೋರ್ಟ್ ಅನುಮತಿ ನೀಡಿದರೂ, ಸ್ವಾಭಿಮಾನಿ ಮಹಿಳೆಯರು ಯಾರೂ ಶಬರಿಮಲೆಯೊಳಗೆ ಪ್ರವೇಶಿಸಲು ಧೈರ್ಯ ತೋರಿಸಲಾರರು ಎಂದಿದ್ದಾರೆ ಗೋಪಾಲಕೃಷ್ಣನ್.
10 ಮತ್ತು 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇಗುಲದೊಳಗೆ ಪ್ರವೇಶ ನಿಷಿದ್ಧ. ಮಹಿಳೆಯರು ಮುಟ್ಟಾಗುತ್ತಾರೆ ಎಂಬ ಕಾರಣದಿಂದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 10 ವಯಸ್ಸಿಗಿಂತ ಕಿರಿಯ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ದೇಗುಲದೊಳಗೆ ಪ್ರವೇಶಿಸಬಹುದಾಗಿದೆ.
ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದು ಪುರಾತನ ಸಂಪ್ರದಾಯ. ನಾವೆಲ್ಲರೂ ಅದನ್ನು ಗೌರವಿಸಲೇ ಬೇಕು. ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಿದರೆ ದೇವಸ್ಥಾನದಲ್ಲಿ ಭಕ್ತರ ನೂಕು ನುಗ್ಗಲು ವೇಳೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅವರಿಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಹೀಗಿರುವಾಗ ಅನೈತಿಕ ಚಟುವಟಿಕೆಗಳೂ ನಡೆಯುವ ಸಾಧ್ಯತೆ ಇದೆ ಎಂದು ಗೋಪಾಲಕೃಷ್ಣನ್ ಹೇಳಿದ್ದಾರೆ.
ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೇರಳದ ಸಚಿವ ಸುರೇಂದ್ರನ್, ಗೋಪಾಲಕೃಷ್ಣನ್ ಅವರು ಯಾಕೆ ಈ ರೀತಿ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಅವರು ಮಹಿಳೆಯರನ್ನು ಮತ್ತು ಯಾತ್ರಾರ್ಥಿಗಳನ್ನು ಅವಹೇಳನ ಮಾಡಿದ್ದಾರೆ. ಅವರು ಈ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದಿದ್ದಾರೆ.
ಎರಡು ವರ್ಷಗಳ ಹಿಂದೆ ಗೋಪಾಲಕೃಷ್ಣನ್ ಅವರು ಶಬರಿಮಲೆಗೆ ಪ್ರವೇಶಿಸುವ ಮಹಿಳೆಯರು ಪರಿಶುದ್ಧರೇ ಎಂದು ಪರಿಶೀಲಿಸಲು ಮೆಷಿನ್‍ನೊಂದನ್ನು ಯಾರಾದರೂ ತಯಾರಿಸಿ ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಅವರ ಹೇಳಿಕೆ ವಿರುದ್ಧ ಕೇರಳದ ಮಹಿಳೆಯರು Happy to Bleed ಎಂಬ ಅಭಿಯಾನವನ್ನು ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.