ADVERTISEMENT

ಮಹಿಳೆಯರಿಗೆ ಶಬರಿಮಲೆ ಪ್ರವೇಶ ನಿಷೇಧ ನಿಲ್ಲದು: ಟಿಡಿಬಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2016, 11:15 IST
Last Updated 12 ಜನವರಿ 2016, 11:15 IST

ತಿರುವನಂತಪುರ (ಪಿಟಿಐ): ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಮಹಿಳೆಯರ ಮೇಲಿನ ನಿಷೇಧ ದೇಗುಲದ ಸಂಪ್ರದಾಯ ಹಾಗೂ ಪದ್ಧತಿಯ ಭಾಗವಾಗಿದ್ದು, ಅದು ಮುಂದುವರೆಯಬೇಕು ಎಂದು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಮಂಗಳವಾರ ಅಭಿಪ್ರಾಯಪಟ್ಟಿದೆ.

ಕೇರಳದ ಈ ಪ್ರಸಿದ್ಧ ದೇವಾಲಯಕ್ಕೆ ಮಹಿಳೆಯರಿಗೆ ಯಾಕೆ ಪ್ರವೇಶ ನಿರಾಕರಿಸಲಾಗುತ್ತಿದೆ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ದೇಗುಲ ಪ್ರವೇಶಕ್ಕೆ 10 ರಿಂದ 50 ವಯೋಮಿತಿಯೊಳಗಿನ ಮಹಿಳೆಯರ ಮೇಲಿನ ನಿರ್ಬಂಧ ಮುಂದುವರೆಸುವ ತಮ್ಮ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸುವುದಾಗಿ ಟಿಡಿಬಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಯುವ ವಕೀಲರ ಅಸೋಸಿಯೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ‘ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಯಾಕೆ ಪ್ರವೇಶ ನಿರಾಕರಿಸಲಾಗುತ್ತಿದೆ? ಇದು ಮಹಿಳೆಯರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಅಲ್ಲವೇ’ ಎಂದು ಪ್ರಶ್ನಿಸಿತ್ತು.

ಹಿಂದಿನ ಎಲ್‌ಡಿಎಫ್‌ ನೇತೃತ್ವದ ಸಿಪಿಎಂ ಸರ್ಕಾರವು 2006ರಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರ ಆಧರಿಸಿ ಸುಪ್ರೀಂ ಕೋರ್ಟ್‌ ಈ ಪ್ರಶ್ನೆಗಳನ್ನು ಎತ್ತಿದೆ. ಅಯ್ಯಪ್ಪ ಸ್ವಾಮಿ ಹಾಗೂ ದೇವಾಲಯದ ಪದ್ಧತಿಗಳ ವಿಶೇಷತೆಯ ಬಗ್ಗೆ ಅವರಿಗೆ ತಿಳಿದಿಲ್ಲ. ಅಪ್ಪಯ್ಯ ಸ್ವಾಮಿಯು ‘ಅಖಂಡ ಬ್ರಹ್ಮಚಾರಿ’ ಎಂದು ಗೋಪಾಲಕೃಷ್ಣನ್‌ ತಿಳಿಸಿದ್ದಾರೆ.

ವಿಎಚ್‌ಪಿ ಬೆಂಬಲ: ಈ ನಡುವೆ, ಮಹಿಳೆಯರಿಗೆ ಶಬರಿಮಲೆ ಪ್ರವೇಶ ನಿರ್ಬಂಧಿಸುವ ಟಿಡಿಬಿ ನಿರ್ಧಾರವನ್ನು ವಿಶ್ವಹಿಂದೂ ಪರಿಷತ್ ಕೂಡ ಬೆಂಬಲಿಸಿದೆ.

ಪ್ರವೇಶ ನಿರ್ಬಂಧದ ಹಿಂದೆ ಕೇವಲ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರಣಗಳಿಲ್ಲ. ಮೂರು ತಿಂಗಳ ಅಲ್ಪಾವಧಿಯಲ್ಲಿ ಲಕ್ಷಾಂತರ ಜನರು ಅಲ್ಲಿಗೆ ಭೇಟಿ ನೀಡುವ ಈ ಬೆಟ್ಟದ ದೇಗುಲದಲ್ಲಿ ಮಹಿಳೆಯರ ಸುರಕ್ಷತೆಯ ಕಾರಣವೂ ಅದರೊಟ್ಟಿಗಿದೆ ಎಂದು ವಿಎಚ್‌ಪಿಯ ಕೇರಳ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಜೆ.ಆರ್.ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.