ನವದೆಹಲಿ: ದೇಶದಲ್ಲಿ ಮಹಿಳೆಯ ಸುರಕ್ಷೆಗಾಗಿರುವ ನಿರ್ಭಯಾ ನಿಧಿಯಲ್ಲಿ ಶೇ.90 ನಿಧಿ 2015ರಿಂದ ಬಳಕೆಯೇ ಆಗಿಲ್ಲ. 2012ರಲ್ಲಿ ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ನಂತರ ಮಹಿಳೆಯರ ಸುರಕ್ಷೆಗಾಗಿ ಕೇಂದ್ರ ಸರ್ಕಾರ ₹3,100 ಕೋಟಿ ವೆಚ್ಚದ ನಿರ್ಭಯಾ ನಿಧಿ ಆರಂಭಿಸಿತ್ತು.
ಆದಾಗ್ಯೂ ಈ ನಿಧಿಯನ್ನು ಎಷ್ಟು ಬಳಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಸಿಕ್ಕ ಉತ್ತರದ ಪ್ರಕಾರ ಕೇಂದ್ರ ಸರ್ಕಾರವು ಆಗಸ್ಟ್ 17ರ ವರೆಗೆ ₹264 ಕೋಟಿ ಅಂದರೆ ಶೇ.8.5ರಷ್ಟು ಹಣವನ್ನು ವಿನಿಯೋಗಿಸಿದೆ.
ಒನ್ ಸ್ಟಾಪ್ ಸೆಂಟರ್ (ಒಎಸ್‍ಸಿ)ಗಳನ್ನು ಆರಂಭಿಸುವುದಕ್ಕಾಗಿ ನಿರ್ಭಯಾ ನಿಧಿ ಬಳಕೆ ಮಾಡುವುದಾಗಿ ಹೇಳಿದ್ದರೂ ಅದರ ಸದುಪಯೋಗವಾಗಿಲ್ಲ, 2015ರಲ್ಲಿ ಒಎಸ್‍ಸಿ ಯೋಜನೆ ಆರಂಭವಾದರೂ ಇದರಿಂದೇನೂ ಸಾಧನೆಯಾಗಿಲ್ಲ.
ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಸಂತ್ರಸ್ತೆಗೆ ವೈದ್ಯಕೀಯ, ಕಾನೂನು, ಪೊಲೀಸ್ ಮತ್ತು ಆಪ್ತ ಸಲಹೆಗಳನ್ನು ನೀಡುವ ಕಾರ್ಯವನ್ನು ಒಎಸ್‍ಸಿ ಮಾಡುತ್ತದೆ. ಒಎಸ್‍ಸಿ ಆರಂಭಿಸುವದಕ್ಕೋಸ್ಕರ ಸರ್ಕಾರ ₹120 ಕೋಟಿ ಹಣ ಪ್ರಸ್ತಾವನೆ ಮಾಡಿದ್ದರೂ ₹64,11 ಕೋಟಿಯನ್ನು ಮಾತ್ರವೇ ಬಿಡುಗಡೆ ಮಾಡಿದೆ.
ಇನ್ನುಳಿದ ₹200 ಕೋಟಿಯನ್ನು ಸಂತ್ರಸ್ತೆಗಾಗಿರುವ ಕೇಂದ್ರ ಪರಿಹಾರ ನಿಧಿ (ಸಿವಿಸಿಎಫ್) ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಹಾರ ನಿಧಿ ನೀಡಿದೆ.
ಆದಾಗ್ಯೂ, ಉಳಿದಿರುವ ₹2,500 ಕೋಟಿಯನ್ನು ಯಾವುದಕ್ಕೆ ಬಳಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಪ್ರಕಟಣೆಯ ಪ್ರಕಾರ ವಿವಿಧ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳಿಂದ ಲಭಿಸಿದ 22 ಪ್ರಸ್ತಾವನೆಗಳಿಗೆ ₹2, 209 ಕೋಟಿ ನೀಡುವಂತೆ ಶಿಫಾರಸು ಮಾಡಲಾಗಿದೆ, ಆದರೆ ಇದರಲ್ಲಿ ಎರಡೇ ಎರಡು ಪ್ರಸ್ತಾವನೆಗಳ ಅನುಷ್ಠಾನಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಏತನ್ಮಧ್ಯೆ ಈ ಹಣವನ್ನು ಎನ್‍ಜಿಒಗಳಿಗೆ ಅಛವಾ ಇತರ ಏಜೆನ್ಸಿಗಳಿಗೆ ನೀಡಲಾಗಿದೆಯೇ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ.
ಈ ಬಗ್ಗೆ ದ ಪ್ರಿಂಟ್ ಮಾಧ್ಯಮದೊಂದಿಗೆ ಮಾತನಾಡಿದ ಹೆಹಲಿ ಕಮಿಷನ್ ಫಾರ್ ವುಮೆನ್‍ನ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಮತ್ತು ಮುಖ್ಯಮಂತ್ರಿಗಳು ನಿಧಿ ಬಿಡುಗಡೆ ಮಾಡುವುದಾಗಿ ವರ್ಷಗಳ ಹಿಂದೆಯೇ ಭರವಸೆ ನೀಡಿದ್ದರು. ಆದರೆ ನಮಗೆ ಇಲ್ಲಿಯವರೆಗೆ ಹಣ ಸಿಗಲಿಲ್ಲ ಎಂದಿದ್ದಾರೆ.
2012ರಲ್ಲಿ ನಿರ್ಭಯಾ ಪ್ರಕರಣ ನಡೆದ ನಂತರ ದೇಶದಾದ್ಯಂತ ಪ್ರತಿಭಟನೆಗಳ ಕಾವು ಹೆಚ್ಚಾದಾಗ ಸರ್ಕಾರ ಮಹಿಳೆಯರ ಸುರಕ್ಷೆಗಾಗಿ 1,000 ಕೋಟಿ ನೀಡುವುದಾಗಿ ಘೋಷಿಸಿತ್ತು. 2017-18ರ ಹಣಕಾಸು ವರ್ಷದ ವರೆಗೆ ನಿರ್ಭಯಾ ನಿಧಿಗೆ ವಹಿವಾಟು ಆದ ಮೊತ್ತ ₹3,100 ಕೋಟಿ. ನಿರ್ಭಯಾ ನಿಧಿಯ ಬಳಕೆ ಸದ್ಯ ಸುಪ್ರೀಂಕೋರ್ಟಿನ ಸೂಕ್ಷ್ಮ ಪರಿಶೀಲನೆಗೊಳಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.