ಶಿಲ್ಲಾಂಗ್ (ಪಿಟಿಐ): ಮಾನವೀಯತೆಯ ಪ್ರತಿರೂಪದಂತಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ (84) ಅವರು ಸೋಮವಾರ ರಾತ್ರಿ ಶಿಲ್ಲಾಂಗ್‌ನಲ್ಲಿ ಹೃದಯಾಘಾತದಿಂದ ನಿಧನರಾದರು.
ಇಲ್ಲಿನ ಇಂಡಿಯನ್ ಇನ್ಟ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂ) ಸೋಮವಾರ ಸಂಜೆ 6:30ರ ಸುಮಾರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಉಪನ್ಯಾಸ ನೀಡುತ್ತಿದ್ದಾಗಲೇ ದಿಢೀರನೆ ಕುಸಿದುಬಿದ್ದು, ಅಸ್ವಸ್ಥಗೊಂಡರು. ಕೂಡಲೇ ಅವರನ್ನು ನಾನ್‌ಗ್ರಿಮ್ ಹಿಲ್ಸ್‌ನಲ್ಲಿರುವ ಬೆಥನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು. ರಾತ್ರಿ 7.45ಕ್ಕೆ ಅವರ ಮರಣವನ್ನು ಅಧಿಕೃತವಾಗಿ ಘೋಷಿಸಲಾಯಿತು. ತೀವ್ರ ಹೃದಯಾಘಾತ ಅವರ ಸಾವಿಗೆ ಕಾರಣ ಎಂದೂ ತಿಳಿಸಲಾಯಿತು. ಕಲಾಂ ಮೇಷ್ಟ್ರು ಎಂದೇ ಹೆಸರಾಗಿದ್ದ ಅವರು, ಪಾಠ ಮಾಡುತ್ತಲೇ ವಿಧಿವಶರಾದರು.
ಕಲಾಂ ಅವರ ಮೃತದೇಹವವನ್ನು ಗುವಾಹಟಿಯಿಂದ ನಾಳೆ ದೆಹಲಿಗೆ ತೆಗೆದುಕೊಂಡು ಹೋಗಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಕಾರ್ಯದರ್ಶಿ ಎಲ್ ಸಿ. ಗೋಯಲ್ ಜತೆಗೆ ಮಾತನಾಡಿದ್ದೇನೆ. ಅವರ ಅಂತ್ಯಕ್ರಿಯೆ ರಾಮೇಶ್ವರಂನಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಪಿಬಿಒ ವಾರ್ಜಿರಿ ಅವರು ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ಕಲಾಂ ಅವರು 2002ರ ಜುಲೈ 25ರಿಂದ 2007ರ ಜುಲೈ 25ರ ತನಕ ಭಾರತದ (ಹನ್ನೊಂದನೆಯ) ರಾಷ್ಟ್ರಪತಿಗಳಾಗಿದ್ದರು. 1997ರಲ್ಲಿ ಭಾರತ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.
ರಾಷ್ಟ್ರಪತಿ ಆಗುವುದಕ್ಕೂ ಮುನ್ನ ಕಲಾಂ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಎ) ಮತ್ತು ಇಸ್ರೊದಲ್ಲಿ ವೈಮಾನಿಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದ ಅವರನ್ನು ಕ್ಷಿಪಣಿಗಳ ಜನಕ, (ಮಿಸೈಲ್ ಮ್ಯಾನ್ ಆಫ್ ಇಂಡಿಯಾ) ಎಂದೇ ಕರೆಯಲಾಗುತ್ತದೆ.
ರಜೆ ಇಲ್ಲ: ‘ಡಾ. ಕಲಾಂ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಕಾಲ ಶೋಕಾಚರಣೆಗೆ ಸರ್ಕಾರ ನಿರ್ಧರಿಸಿದೆ. ಆದರೆ ರಜೆ ಘೋಷಿಸಿಲ್ಲ’ ಎಂದು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು. ರಾಜ್ಯದಲ್ಲಿ ರಾಷ್ಟ್ರಪತಿ ಕಾರ್ಯಕ್ರಮ ರದ್ದಾಗಿದೆ.
ಭಾರತವು ‘ಮಾರ್ಗದರ್ಶಕ’ನನ್ನು ಕಳೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಕಲಾಂ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಒಬ್ಬ ಮಹಾನ್ ವಿಜ್ಞಾನಿ, ಅದ್ಭುತ ರಾಷ್ಟ್ರಪತಿ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಜನಸಾಮಾನ್ಯರ ಹೃದಯ ಸಿಂಹಾಸನದಲ್ಲಿ ಸ್ಥಾನಪಡೆದು, ಎಲ್ಲರಿಗೂ ಸ್ಪೂರ್ತಿಯಾಗಿದ್ದ ಕಲಾಂ ಅವರನ್ನು ದೇಶ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.