ಮಾಲೆ (ಪಿಟಿಐ):ಸರ್ಕಾರಿ ಪ್ರಾಯೋಜಕತ್ವದ ಭಯೋತ್ಪಾದನೆಯು ಮಾನವ ಕುಲ ಎದುರಿಸುತ್ತಿರುವ ಅತ್ಯಂತ ದೊಡ್ಡ ಬೆದರಿಕೆ. ಇದರ ವಿರುದ್ಧ ಜಾಗತಿಕ ನಾಯಕರೆಲ್ಲ ಒಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಹೇಳಿದ್ದಾರೆ. ಈ ಮೂಲಕ ಅವರು ಪಾಕಿಸ್ತಾನವನ್ನು ಪರೋಕ್ಷವಾಗಿ ಕುಟುಕಿದ್ದಾರೆ.
ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ಗೆ ಶನಿವಾರ ಮೊದಲ ಅಧಿಕೃತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ, ಮಾಲ್ಡೀವ್ಸ್ ಸರ್ಕಾರವು ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ ‘ನಿಶಾನ್ ಇಜುದ್ದೀನ್’ ಪ್ರಶಸ್ತಿಯನ್ನು ಮೋದಿ ಅವರಿಗೆ ಅಲ್ಲಿನ ಅಧ್ಯಕ್ಷಇಬ್ರಾಹಿಂ ಮೊಹಮ್ಮದ್ ಸಾಲಿಹ್ ನೀಡಿದರು.
ಭಾರತ ಮತ್ತು ಮಾಲ್ಡೀವ್ಸ್ ನಡುವಣ ಸಂಬಂಧವು ಇತಿಹಾಸಕ್ಕೂ ಪುರಾತನ ಎಂದು ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ ಮೋದಿ ಹೇಳಿದರು.
ಒಳ್ಳೆಯ ಉಗ್ರರು ಮತ್ತು ಕೆಟ್ಟ ಉಗ್ರರು ಎಂದು ಜನರು ಈಗಲೂ ಗುರುತಿಸುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಪಾಕಿಸ್ತಾನವು ಕುಮ್ಮಕ್ಕು ನೀಡುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಭಾರತವು ಹಿಂದಿನಿಂದಲೂ ಆಗ್ರಹಿಸುತ್ತಿದೆ.
‘ನೆರೆಹೊರೆಯೇ ಮುಖ್ಯ’ ಎಂಬ ನೀತಿಯನ್ನು ಭಾರತವು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ ಎಂಬ ಸಂದೇಶ ರವಾನಿಸುವುದಕ್ಕಾಗಿಯೇ ಮೋದಿ ಅವರು ಎರಡನೇ ಅವಧಿಯಲ್ಲಿ ಮಾಲ್ಡೀವ್ಸ್‌ಗೆ ಮೊದಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಫೆಬ್ರುವರಿ 5ರಂದು ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ, ಮಾಲ್ಡೀವ್ಸ್–ಭಾರತದ ಬಾಂಧವ್ಯ ಹದಗೆಟ್ಟಿತ್ತು.
ಆದರೆಇಬ್ರಾಹಿಂ ಸಾಲಿಹ್ ಅವರು ನವೆಂಬರ್‌ನಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಬಾಂಧವ್ಯ ಪುನಃ ಸಹಜಸ್ಥಿತಿಗೆ ಮರಳಿತ್ತು. ಸಾಲಿಹ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಳೆದ ನವೆಂಬರ್‌ನಲ್ಲಿ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.