ನವದೆಹಲಿ (ಪಿಟಿಐ): ‘ದೇಶದಲ್ಲಿ ಈಗ ಇರುವಂತಹ ಮೀಸಲಾತಿ ವ್ಯವಸ್ಥೆಯ ಪುನರ್ ವಿಮರ್ಶೆ ಮಾಡಬೇಕಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಆಗ್ರಹಿಸಿದ್ದಾರೆ.
ತಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಪಟೇಲ್ ಸಮುದಾಯ ಗುಜರಾತ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಇದರ ನಡುವೆ ಭಾಗವತ್ ನೀಡಿರುವ ಹೇಳಿಕೆ ಮೀಸಲಾತಿ ಪರಿಕಲ್ಪನೆಗೆ ಹೊಸ ಆಯಾಮ ನೀಡುವ ಸೂಚನೆ ನೀಡಿದೆ.
‘ಈಗ ಇರುವಂತಹ ಮೀಸಲಾತಿ ನೀತಿಯನ್ನು ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಗಿದೆ. ಯಾರಿಗೆಲ್ಲ ಮೀಸಲಾತಿ ನೀಡಬೇಕು ಮತ್ತು ಎಷ್ಟು ವರ್ಷಗಳ ಕಾಲ ನೀಡಬೇಕು ಎಂಬುದನ್ನು ನಿರ್ಧರಿಸಲು ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳನ್ನೊಗೊಂಡ ರಾಜಕೀಯೇತರ ಸಮಿತಿಯನ್ನು ರಚಿಸುವುದು ಅಗತ್ಯ’ ಎಂದು ಅವರು ತಿಳಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಲವು ಆಶೋತ್ತರಗಳು ಇರುವುದು ಸಾಮಾನ್ಯ. ಆದ್ದರಿಂದ ಇಲ್ಲಿ ಆಸಕ್ತ ಗುಂಪುಗಳು ಹುಟ್ಟುತ್ತವೆ. ಆದರೆ ಒಂದು ಗುಂಪಿನ ಆಶೋತ್ತರಗಳನ್ನು ಈಡೇರಿಸಲು ಇನ್ನೊಂದು ಗುಂಪಿನ ಹಿತಾಸಕ್ತಿಗಳನ್ನು ಬಲಿಕೊಡಬಾರದು. ರಾಷ್ಟ್ರದ ಹಿತಾಸಕ್ತಿಯಲ್ಲಿಯೇ ಎಲ್ಲರ ಹಿತಾಸಕ್ತಿ ಅಡಗಿದೆ. ಸರ್ಕಾರ ಕೂಡ ಈ ವಿಷಯದಲ್ಲಿ ಅತ್ಯಂತ ಸೂಕ್ಷ್ಮವಾಗಿರಬೇಕು’ ಎಂದು ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ನೀಡಿದ ಸಂದರ್ಶನದಲ್ಲಿ ಭಾಗವತ್ ತಿಳಿಸಿದ್ದಾರೆ.
*
ಯಾರಿಗೆಲ್ಲ ಮೀಸಲಾಗಿ ನೀಡಬೇಕು, ಎಷ್ಟು ಸಮಯದವರೆಗೆ ನೀಡಬೇಕು ಎಂಬುದನ್ನು ನಿರ್ಧರಿಸಲು ರಾಜಕೀಯೇತರ ಸಮಿತಿ ರಚಿಸುವುದು ಅಗತ್ಯ.
- ಮೋಹನ್ ಭಾಗವತ್
ಆರೆಸ್ಸೆಸ್ ಮುಖ್ಯಸ್ಥ
*
ಮೀಸಲಾತಿ ನೀತಿ ಪರಾಮರ್ಶೆಯ ಬಗ್ಗೆ ಬಿಜೆಪಿ ಒಲವು ಹೊಂದಿಲ್ಲ. ಪಕ್ಷವು ಹಿಂದುಳಿದ ವರ್ಗಗಳ ಮೀಸಲಾತಿ ಹಕ್ಕನ್ನು ಉಳಿಸಿಕೊಳ್ಳಲು ಬಯಸುತ್ತದೆ.
- ರವಿ ಶಂಕರ್ ಪ್ರಸಾದ್
ಕೇಂದ್ರ ಸಚಿವ
*
ನೀವು ತಾಯಿಯ ಹಾಲು ಕುಡಿದಿದ್ದರೆ ಮೀಸಲಾತಿ ರದ್ದುಪಡಿಸಿ, ಆಗ ಪ್ರತಿಯೊಬ್ಬರ ತಾಕತ್ತು ತಿಳಿಯುತ್ತದೆ.
– ಲಾಲೂ ಪ್ರಸಾದ್
ಆರ್‌ಜೆಡಿ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.