ಮುಂಬೈ: 2008ರ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸುವುದಕ್ಕೂ ಮೊದಲೇ ಎರಡು ಬಾರಿ ಪಾಕಿಸ್ತಾನದ ಉಗ್ರರು ಈ ನಗರದ ಮೇಲೆ ದಾಳಿ ನಡೆಸಲು ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದರು ಎಂಬ ಅಂಶವನ್ನು ಪಾಕಿಸ್ತಾನ ಮೂಲದ ಅಮೆರಿಕದ ಉಗ್ರ ಡೇವಿಡ್ ಹೆಡ್ಲಿ ಬಹಿರಂಗಪಡಿಸಿದ್ದಾನೆ.
ಅಮೆರಿಕದ ಅಜ್ಞಾತ ಸ್ಥಳದಿಂದ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡ ಹೆಡ್ಲಿ, ಹಲವು ಸ್ಫೋಟಕ ವಿವರಗಳನ್ನು ಬಾಯ್ಬಿಟ್ಟಿದ್ದಾನೆ.
‘2008ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮುಂಬೈ ಮೇಲೆ ದಾಳಿಗೆ ನಡೆಸಿದ್ದ ಪ್ರಯತ್ನಗಳು ವಿಫಲವಾಗಿದ್ದವು. ನವೆಂಬರ್‌ನಲ್ಲಿ ನಡೆಸಿದ ಪ್ರಯತ್ನ ಯಶ ಕಂಡಿತ್ತು’ ಎಂದು ಹೆಡ್ಲಿ ಹೇಳಿದ್ದಾನೆ.
ಮೊದಲ ಪ್ರಯತ್ನದ ಬಗ್ಗೆ ಕೇಳಿದಾಗ, ‘ಲಷ್ಕರ್ ಆತ್ಮಹತ್ಯಾ ದಳದ 10 ಸದಸ್ಯರಿದ್ದ ದೋಣಿ ಸಮುದ್ರದಲ್ಲಿ ಬಂಡೆಗೆ ಅಪ್ಪಳಿಸಿದ್ದರಿಂದ ಮೊದಲ ಪ್ರಯತ್ನ ವಿಫಲವಾಗಿತ್ತು. ಅದರಲ್ಲಿದ್ದ ಶಸ್ತ್ರಾಸ್ತ್ರಗಳು ನೀರಿಗೆ ಬಿದ್ದ ಕಾರಣ ಎಲ್ಲರೂ ಪಾಕ್‌ಗೆ ವಾಪಸಾಗಿದ್ದರು’ ಎಂದಿದ್ದಾನೆ.
‘ಅದಾದ ಒಂದು ತಿಂಗಳ ಬಳಿಕ ಎರಡನೇ ಪ್ರಯತ್ನ ನಡೆದಿತ್ತು. ಆದರೆ ಅದು ಕೂಡಾ ವಿಫಲವಾಗಿತ್ತು’ ಎಂದು ಉತ್ತರಿಸಿದ್ದಾನೆ. ಮೊದಲ ಮತ್ತು 2ನೇ ಪ್ರಯತ್ನದ ವೇಳೆ ದೋಣಿಯಲ್ಲಿದ್ದವರು ಯಾರು ಎಂದು ಕೇಳಿದಾಗ, ‘ಎರಡೂ ಸಲ ಅದೇ ಹತ್ತು ಮಂದಿ ಇದ್ದರು’ ಎಂದಿದ್ದಾನೆ, ಮೂರನೇ ಬಾರಿ ಅದೇ ತಂಡ ಬಂದಿತ್ತೇ ಎಂಬ ಪ್ರಶ್ನೆಗೆ, ‘ಹೌದು. ಅದೇ 10 ಮಂದಿ ಇದ್ದರು’ ಎಂದು ಹೇಳಿದ್ದಾನೆ. ಮುಂಬೈ ದಾಳಿಯ ವಿಚಾರಣೆ ನಡೆಸಿದ್ದ ಮುಂಬೈ ಕ್ರೈಂ ಬ್ರಾಂಚ್ ಮತ್ತು ರಾಷ್ಟ್ರೀಯ ತನಿಖಾ ದಳಕ್ಕೆ ದೊರೆತ ಹೊಸ ಮಾಹಿತಿ ಇದು. ದಾಳಿಯ ವೇಳೆ ಸೆರೆಸಿಕ್ಕಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ ಕೂಡಾ ವಿಚಾರಣೆ ವೇಳೆ ಈ ಮಾಹಿತಿ ನೀಡಿರಲಿಲ್ಲ.
ಲಷ್ಕರ್ ಕೃತ್ಯ: ಮುಂಬೈ ದಾಳಿಯು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮತ್ತು ಲಷ್ಕರ್ ಎ ತಯಬಾ ಸಂಘಟನೆ ಸೇರಿ ನಡೆಸಿದ್ದ ಕೃತ್ಯ ಎಂಬುದನ್ನು ಹೇಡ್ಲಿ ಮತ್ತೊಮ್ಮೆ ದೃಢಪಡಿಸಿದ್ದಾನೆ. ಐಎಸ್ಐ ಜತೆ ಕೆಲಸ ಮಾಡುತ್ತಿದ್ದ ಪಾಕ್ ಸೇನೆಯ ಮೂವರು ಮೇಜರ್‌ಗಳನ್ನು (ನಿವೃತ್ತ) ಭೇಟಿಯಾಗಿದ್ದೆ ಎಂದೂ ತಿಳಿಸಿದ್ದಾನೆ.
ಲಷ್ಕರ್ ಸಂಘಟನೆಯ ಕಟ್ಟಾ ಬೆಂಬಲಿಗನಾಗಿದ್ದೆ ಎಂಬುದನ್ನು ಒಪ್ಪಿಕೊಂಡಿರುವ ಆತ, ಒಟ್ಟು ಎಂಟು ಸಲ ಭಾರತಕ್ಕೆ ಭೇಟಿ ನೀಡಿದ್ದಾಗಿ ಹೇಳಿದ್ದಾನೆ.
* ಮೂರು ಮದುವೆ
ತಾನು ಮೂರು ಮದುವೆಯಾಗಿರುವುದಾಗಿ ಹೆಡ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಪತ್ನಿಯರ ಹೆಸರನ್ನು ಶಾಜಿಯಾ ಗೀಲಾನಿ, ಪೋರ್ಟಿಯಾ ಪೀಟರ್ಸ್ ಮತ್ತು ಫಾಯಿಜಾ ಔತೆಲ್ಲಾ ಎಂದಿದ್ದಾನೆ.
‘ನೀನು ವಿವಾಹಿತನೇ’ ಎಂದು ಉಜ್ವಲ್ ನಿಕಂ ಕೇಳಿದಾಗ, ‘ಹೌದು. 1999ರಲ್ಲಿ ಮದುವೆಯಾಗಿದ್ದೆ’ ಎಂದು ಉತ್ತರಿಸಿದ್ದಾನೆ. ‘ನಿನಗೆ ಎಷ್ಟು ಪತ್ನಿಯರಿದ್ದಾರೆ’ ಎಂದಾಗ, ‘ಒಂದು’ ಎಂದನಲ್ಲದೆ, ಶಾಜಿಯಾಳ ಹೆಸರು ತಿಳಿಸಿದ್ದಾನೆ. ಪೋರ್ಟಿಯಾ ಪೀಟರ್ಸ್ ನಿನಗೆ ಏನಾಗಬೇಕು ಎಂದು ಕೇಳಿದಾಗ, ‘ಆಕೆಯನ್ನೂ ಮದುವೆಯಾಗಿದ್ದೇನೆ’ ಎಂದಿದ್ದಾನೆ. ಫಾಯಿಜಾಳ ಬಗ್ಗೆ ಕೇಳಿದಾಗ, ‘ಆಕೆ ನನ್ನ ಮೂರನೇ ಪತ್ನಿ. 2007ರಲ್ಲಿ ಮದುವೆಯಾಗಿದ್ದೇನೆ’ ಎಂದು ಉತ್ತರಿಸಿದ್ದಾನೆ.
* ವೀಸಾ ಪಡೆಯಲು ಸುಳ್ಳು ಮಾಹಿತಿ
ಷಿಕಾಗೊದಲ್ಲಿರುವ ಭಾರತೀಯ ಕಾನ್ಸಲ್ ಜನರಲ್ ಕಚೇರಿಯಲ್ಲಿ ಭಾರತದ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಸುಳ್ಳು ವಿವರಗಳನ್ನು ನೀಡಿದ್ದನ್ನು ಹೆಡ್ಲಿ ಒಪ್ಪಿಕೊಂಡಿದ್ದಾನೆ. ‘ನನ್ನ ಹುಟ್ಟಿದ ದಿನಾಂಕ, ಜನ್ಮಸ್ಥಳ, ರಾಷ್ಟ್ರೀಯತೆ, ತಾಯಿಯ ಹೆಸರು, ಆಕೆಯ ರಾಷ್ಟ್ರೀಯತೆ ಮತ್ತು ಪಾಸ್‌ಪೋರ್ಟ್ ನಂಬರ್ ಹೊರತುಪಡಿಸಿ ಉಳಿದೆಲ್ಲ ಮಾಹಿತಿಗಳನ್ನು ತಪ್ಪಾಗಿ ನೀಡಿದ್ದೆ. ನನ್ನ ನೈಜ ಗುರುತು ಮರೆಮಾಚಲು ಹೀಗೆ ಮಾಡಿದ್ದೆ’ ಎಂದಿದ್ದಾನೆ.
*ಹೆಸರು ಬದಲಿಸಿದ್ದೆ
‘ದಾವೂದ್ ಗಿಲಾನಿ ಎಂಬುದು ನನ್ನ ನಿಜವಾದ ಹೆಸರು. ಭಾರತಕ್ಕೆ ಸುಲಭವಾಗಿ ಭೇಟಿ ನೀಡುವ ಉದ್ದೇಶದಿಂದ 2006ರಲ್ಲಿ ಹೆಸರನ್ನು ಡೇವಿಡ್ ಹೆಡ್ಲಿ ಎಂದು ಬದಲಿಸಿದ್ದೆ’ ಎಂದಿದ್ದಾನೆ.
ಹೆಡ್ಲಿಯ ತಪ್ಪೊಪ್ಪಿಗೆ
* ನಾನು ಲಷ್ಕರ್ ಎ ತಯಬಾ ಸಂಘಟನೆಯ ಕಟ್ಟಾ ಬೆಂಬಲಿಗ
* ಭಾರತಕ್ಕೆ ಭೇಟಿ ನೀಡುವ ಉದ್ದೇಶದಿಂದ ದಾವೂದ್ ಗಿಲಾನಿ ಹೆಸರನ್ನು ಡೇವಿಡ್ ಹೆಡ್ಲಿ ಎಂದು ಬದಲಿಸಿದ್ದೆ
* ಭಾರತವನ್ನು ಶತ್ರು ದೇಶದಂತೆ ಕಂಡಿದ್ದೆ
* ಭಾರತಕ್ಕೆ ಒಟ್ಟು 8 ಸಲ ಭೇಟಿ; ಏಳು ಸಲ ಪಾಕ್‌ನಿಂದ ನೇರವಾಗಿ ಬಂದಿದ್ದರೆ, ಒಮ್ಮೆ ಯುಎಇಯಿಂದ ಬಂದಿದ್ದೆ
* ದಾಳಿಗೆ ಮುನ್ನ 7 ಸಲ ಮುಂಬೈಗೆ ಭೇಟಿ; ದಾಳಿಯ ಬಳಿಕ ಒಮ್ಮೆ ದೆಹಲಿಗೆ (2009ರ ಮಾರ್ಚ್) ಭೇಟಿ
* ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್‌ನ ಭಾಷಣದಿಂದ ಪ್ರಭಾವಿತನಾಗಿ 2002 ರಲ್ಲಿ ಎಲ್‌ಇಟಿ ಸೇರಿದ್ದೆ
* ಹಫೀಜ್ ಮತ್ತು ಎಲ್‌ಇಟಿ ಕಮಾಂಡರ್ ಝಕೀವುರ್ ರೆಹಮಾನ್ ಲಖ್ವಿ ಅವರ ಮಾರ್ಗದರ್ಶನದಲ್ಲಿ ತರಬೇತಿ
* ಐಎಸ್ಐ ಅಧಿಕಾರಿಗಳಾದ ಮೇಜರ್ ಇಕ್ಬಾಲ್, ಮೇಜರ್ ಅಲಿ ಮತ್ತು ಮೇಜರ್ ಅಬ್ದುಲ್ ರೆಹಮಾನ್ ಪಾಷಾ ಅವರ ಭೇಟಿಯಾಗಿದ್ದೆ
* ಎಲ್‌ಇಟಿ ಮುಖಂಡ ಸಾಜಿದ್ ಮೀರ್ ಜತೆ ಸಂಪರ್ಕ; ಆತನ ನಿರ್ದೇಶನದಂತೆ ಕೆಲಸ
* ಮುಂಬೈ ಮೇಲಿನ ದಾಳಿಯ ಎರಡು ಪ್ರಯತ್ನಗಳು ವಿಫಲವಾಗಿದ್ದವು
* ಮುಂಬೈ ನಗರದ ವಿಡಿಯೊ ಚಿತ್ರೀಕರಣ ಮಾಡಿದ್ದೆ
* ನನಗೆ ಮೂರು ಮದುವೆಯಾಗಿದೆ
* ಭಾರತದ ವೀಸಾ ಪಡೆಯಲು ಸುಳ್ಳು ಮಾಹಿತಿ ನೀಡಿದ್ದೆ
* ಪಾಕ್– ಆಫ್ಘನ್ ಗಡಿಯಲ್ಲಿ ಒಮ್ಮೆ ನನ್ನನ್ನು ಬಂಧಿಸಲಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.