ತಿರುವನಂತಪುರ: ಸ್ತನ್ಯಪಾನದ ಕುರಿತ ಮನೋಭಾವ ಬದಲಾಯಿಸುವ ನಿಟ್ಟಿನಲ್ಲಿ ಜನಪ್ರಿಯ ಮಲಯಾಳಿ ಪಾಕ್ಷಿಕ ‘ಗೃಹಲಕ್ಷ್ಮಿ’ ಹೊಸ ಹೆಜ್ಜೆಯನ್ನಿಟ್ಟಿದೆ.
ನಿಯತಕಾಲಿಕೆಯ ಮುಖಪುಟದಲ್ಲಿ ಮಹಿಳೆಯೊಬ್ಬರು ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರವನ್ನು ಇದೇ ಮೊದಲ ಬಾರಿ ಪ್ರಕಟಿಸಿದೆ.
ನಟಿ ಮತ್ತು ರೂಪದರ್ಶಿ ಜೀಲು ಜೋಸೆಫ್ (27) ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೀಲು ಅವಿವಾಹಿತರು.
‘ದಿಟ್ಟಿಸಿ ನೋಡಬೇಡಿ, ನಾವು ಎದೆ ಹಾಲುಣಿಸುತ್ತಿದ್ದೇವೆ- ಇದು ತಾಯಂದಿರ ಮಾತು’ ಎನ್ನುವ ಶೀರ್ಷಿಕೆಯನ್ನು ಮುಖಪುಟದಲ್ಲಿ ನೀಡಲಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ವೈರಲ್ ಆಗಿದ್ದು, ಹಲವರು ವಿಭಿನ್ನ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
‘ಎದೆಯ ಮೇಲೆ ಬಟ್ಟೆ ಇಲ್ಲದೆಯೇ ಸ್ತನ್ಯಪಾನ ಮಾಡಿಸುವ ಕುರಿತು ಪ್ರಚಾರಾಂದೋಲನ ಹಮ್ಮಿಕೊಳ್ಳುವ ಬಗ್ಗೆ ಗೃಹಲಕ್ಷ್ಮಿ ನಿಯತಕಾಲಿಕೆ ಸಂಪರ್ಕಿಸಿದಾಗ ನನಗೆ ಯಾವುದೇ ರೀತಿಯ ಹಿಂಜರಿಕೆಯಾಗಲಿಲ್ಲ’ ಎಂದು ಜೀಲು ಹೇಳಿದ್ದಾರೆ.
‘ನಾಚಿಕೆಯಾಗುತ್ತದೆ ಅಥವಾ ಜನರು ಏನಾದರೂ ಟೀಕೆ ಮಾಡಬಹುದು ಎನ್ನುವ ಭಯದಿಂದ ನಾನು ನಂಬಿದಂತಹ ವಿಷಯಗಳಿಂದ ದೂರವಿರಬಾರದು. ಇದು ನನ್ನ ನಿರ್ಧಾರ’ ಎಂದು ಜೀಲು ಹೇಳಿದ್ದಾರೆ.
ಕವಯತ್ರಿ ಮತ್ತು ಗಗನಸಖಿಯಾಗಿರುವ ಜೀಲು ಇಡುಕ್ಕಿ ಜಿಲ್ಲೆಯ ಕುಮಿಲಿಯವರು. ನಿಯತಕಾಲಿಕೆಯ ಮುಖಪುಟದ ಚಿತ್ರಕ್ಕಾಗಿ ಸಹಿ ಹಾಕುವ ಮುನ್ನ ಜೀಲು ಅವರ ತಾಯಿ, ಇಬ್ಬರು ಸಹೋದರಿಯರು ವಿರೋಧ ವ್ಯಕ್ತಪಡಿಸಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಮಗುವಿಗೆ ಎದೆ ಹಾಲುಣಿಸುವುದು ಸೂಕ್ತವಲ್ಲ ಅಥವಾ ಇತರರಿಗೆ ಮುಜುಗರ ತರಿಸುತ್ತದೆ ಎನ್ನುವ ಮನೋಭಾವ ಬದಲಾಯಿಸುವುದು ನಿಯತಕಾಲಿಕೆಯ ಪ್ರಚಾರಾಂದೋಲನದ ಉದ್ದೇಶವಾಗಿದೆ.
‘ಲೈಂಗಿಕ ಶಿಕ್ಷಣ ಮತ್ತು ಮುಟ್ಟಿನ ಬಗ್ಗೆಯೂ ಮುಕ್ತ ಚರ್ಚೆ ನಡೆಯುವ ಅಗತ್ಯವಿದೆ. ನನ್ನ ದೇಹದ ಮೇಲೆ ನನಗೆ ಸಂಪೂರ್ಣ ಹಕ್ಕು ಇದೆ. ಈ ಬಗ್ಗೆ ನಾಚಿಕೆ ಇಲ್ಲ. ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯದ ಬಗ್ಗೆ ಏನಾದರೂ ಮಾಡಲು ಏಕೆ ಹೆದರಬೇಕು’ ಎಂದು ಜೀಲು ಪ್ರಶ್ನಿಸಿದ್ದಾರೆ.
ಈ ಚಿತ್ರದ ಬಗ್ಗೆ ಟೀಕೆಗಳು ಸಹ ವ್ಯಕ್ತವಾಗಿವೆ. ರೂಪದರ್ಶಿ ಅವರನ್ನು ಈ ಪ್ರಚಾರಂದೋಲನಕ್ಕೆ ಬಳಸಿರುವುದು ಎಷ್ಟು ಸರಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಲಾಗಿದೆ. ಇನ್ನು ಕೆಲವರು ಹಾಲುಣಿಸುವುದನ್ನು ಯಾರೂ ಕೆಟ್ಟದೃಷ್ಟಿಯಿಂದ ನೋಡುವುದಿಲ್ಲ ಎಂದಿದ್ದಾರೆ.
*
ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಮತ್ತು ಹೆಮ್ಮೆಯಿಂದ ಎದೆ ಹಾಲುಣಿಸುವ ಬಯಸುವ ಎಲ್ಲ ತಾಯಂದಿರಿಗೆ ನನ್ನ ಈ ಚಿತ್ರವನ್ನು ಅರ್ಪಣೆ ಮಾಡುತ್ತಿದ್ದೇನೆ.
–ಜೀಲು ಜೋಸೆಫ್,
ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.