ನವದೆಹಲಿ (ಪಿಟಿಐ): ಮೊನಚು ಬರವಣಿಗೆ, ನೇರ ಹಾಗೂ ನಿರ್ಭೀತ ನುಡಿ ಮತ್ತು ಕಸುಬುದಾರಿಕೆಯಿಂದ ಭಾರತೀಯ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ ‘ಔಟ್‌ಲುಕ್’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ವಿನೋದ್ ಮೆಹ್ತಾ ಅವರು ದೀರ್ಘ ಕಾಲದ ಅನಾರೋಗ್ಯದಿಂದಾಗಿ ಭಾನುವಾರ ಕೊನೆಯುಸಿರೆಳೆದರು.
೭೩ ವರ್ಷದ ಮೆಹ್ತಾ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಕೃತಕ ಉಸಿರಾಟ ಸಾಧನ ಅಳವಡಿಸಲಾಗಿತ್ತು. ಮೆಹ್ತಾ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾಗಿ ಏಮ್ಸ್ ವಕ್ತಾರ ಅಮಿತ್ ಗುಪ್ತಾ ಹೇಳಿದ್ದಾರೆ.
೨೦೧೧ರಲ್ಲಿ ಬರೆದ ಆತ್ಮಕಥೆ ‘ಲಖನೌ ಬಾಯ್’ ಮೆಹ್ತಾ ಅವರ ಜನಪ್ರಿಯ ಕೃತಿ. ಇತ್ತೀಚಿನ ಕೃತಿ ‘ಎಡಿಟರ್ ಅನ್ಪ್ಲಗ್ಡ್’ ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದೆ. ಅನಾರೋಗ್ಯದ ಕಾರಣ ಅವರು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.
ಅಂಕಣಬರಹ ಹಾಗೂ ಟಿ.ವಿ ಚರ್ಚೆಗಳಿಂದ ಜನಪ್ರಿಯರಾಗಿದ್ದ ಅವರು ತಮ್ಮ ಪ್ರಾಮಾಣಿಕತೆ ಹಾಗೂ ದಿಟ್ಟತನದಿಂದಾಗಿ ಪತ್ರಿಕೋದ್ಯಮದಲ್ಲಿ ಹೆಸರು ಮಾತಾಗಿದ್ದರು.
ವಲಸೆ: ಮೆಹ್ತಾ ಜನಿಸಿದ್ದು ೧೯೪೨ರ ಮೇ ೩೧ರಂದು ರಾವಲ್ಪಿಂಡಿಯಲ್ಲಿ. (ಈಗ ಪಾಕಿಸ್ತಾನದಲ್ಲಿದೆ) ಅವರ ತಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶ ವಿಭಜನೆ ಬಳಿಕ ಮೆಹ್ತಾ ಕುಟುಂಬ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ಲಖನೌದಲ್ಲಿ ನೆಲೆ ಕಂಡುಕೊಂಡಿತು. ಮೆಹ್ತಾ ಶಾಲೆಗೆ ಹೋಗಿದ್ದು, ಬಿ.ಎ ಪದವಿ ಪಡೆದುಕೊಂಡಿದ್ದು ಎಲ್ಲವೂ ಇಲ್ಲಿಯೇ.
ಮೆಹ್ತಾ ಅವರ ಪತ್ನಿ ಸುಮಿತಾ ಪಾಲ್ ಕೂಡ ಪತ್ರಕರ್ತೆ. ಅವರು ‘ದಿ ಪಯನಿಯರ್’ ಹಾಗೂ ‘ಸಂಡೇ ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಕೆಲಸ ಮಾಡಿದ್ದರು. ಈ ದಂಪತಿಗೆ ಮಕ್ಕಳಿಲ್ಲ.
ಬಡವಾಯಿತು ಪತ್ರಿಕೋದ್ಯಮ |
ಉತ್ಪ್ರೇಕ್ಷೆ ಹಾಗೂ ಶಬ್ದಗಳ ಆಡಂಬರ ಮೆಹ್ತಾ ಅವರಿಗೆ ಹಿಡಿಸುತ್ತಿರಲಿಲ್ಲ. ಮಹತ್ವದ ವಿದ್ಯಮಾನವನ್ನು ಆಸಕ್ತಿದಾಯಕವಾಗಿ ಹೇಳಬೇಕು ಎನ್ನುವುದೇ ಅವರ ಧ್ಯೇಯವಾಗಿತ್ತು. ವೃತ್ತಿಪರ ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದ ಮೆಹ್ತಾ ಅವರ ಅಗಲುವಿಕೆಯಿಂದ ಭಾರತೀಯ ಪತ್ರಿಕೋದ್ಯಮ ಬಡವಾಗಿದೆ. ಅವರಿಗೆ ‘ಕೊನೆಯ ಶ್ರೇಷ್ಠ ಸಂಪಾದಕ’ ಎಂಬ ಬಿರುದನ್ನು ನಿಸ್ಸಂದೇಹವಾಗಿ ಕೊಡಬಹುದು |
ಮೆಹ್ತಾ ಲಂಡನ್‌ನಲ್ಲಿದ್ದಾಗ ಸ್ವಿಟ್ಜರ್ಲೆಂಡ್‌ನ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಈ ಸಂಬಂಧದಿಂದ ಹುಟ್ಟಿದ ಮಗಳೊಬ್ಬಳು ಅವರಿಗೆ ಇದ್ದಾಳೆ. ಈ ವಿಷಯವನ್ನು ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಆತ್ಮಕಥೆ ಪ್ರಕಟವಾಗುವ ವರೆಗೆ ಈ ವಿಚಾರ ಅವರ ಪತ್ನಿಯನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ. ಪತ್ನಿಯ ಬಳಿ ಚರ್ಚಿಸಿ ಅವರಿಂದ ಬೆಂಬಲ ಸಿಕ್ಕ ನಂತರವೇ ಮೆಹ್ತಾ ಈ ವಿಷಯವನ್ನು ಆತ್ಮಕಥೆಯಲ್ಲಿ ಬರೆದುಕೊಂಡರು.
ಬಾಲಿವುಡ್ ಅಭಿನೇತ್ರಿ ಮೀನಾ ಕುಮಾರಿ, ಸಂಜಯ್ ಗಾಂಧಿ ಅವರ ಜೀವನಚರಿತ್ರೆಗಳನ್ನೂ ಅವರು ಬರೆದಿದ್ದಾರೆ. ‘ಮಿಸ್ಟರ್ ಎಡಿಟರ್, ಹೌ ಕ್ಲೋಸ್ ಆರ್ ಯು ಟು ದ ಪಿಎಂ?’ ಎನ್ನುವ ಶೀರ್ಷಿಕೆಯಡಿ ಅವರ ಲೇಖನ ಸಂಗ್ರಹ ೨೦೦೧ರಲ್ಲಿ ಪ್ರಕಟವಾಯಿತು.
ಟೀಕೆ: ಉದಾರವಾದಿ ನಿಲುವಿನಿಂದಾಗಿ ಮೆಹ್ತಾ ಅವರು ಬಲಪಂಥೀಯರ ಟೀಕೆಗಳಿಗೆ ಒಳಗಾಗಿದ್ದೂ ಉಂಟು. ‘ನೀವು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ನ ಪರವಾಗಿದ್ದೀರಿ. ಬಿಜೆಪಿ ಹಾಗೂ ಹಿಂದುತ್ವವನ್ನು ವಿರೋಧಿಸುತ್ತೀರಿ’... ಇತ್ಯಾದಿ ನಿಂದನಾತ್ಮಕ ಪತ್ರಗಳು ಮೆಹ್ತಾ ಅವರಿಗೆ ಬರುತ್ತಿದ್ದವು. ತಮ್ಮ ಅಂಕಣ ಬರಹಗಳಲ್ಲಿ ಇವುಗಳನ್ನೆಲ್ಲ ಅವರು ಪ್ರಸ್ತಾಪಿಸುತ್ತಿದ್ದರು.
ಕಾರ್ಖಾನೆಯಿಂದ ‘ಔಟ್‌ಲುಕ್’ ವರೆಗೆ....
ತೃತೀಯ ದರ್ಜೆಯಲ್ಲಿ ಬಿ.ಎ ಪಾಸಾದ ಮೆಹ್ತಾ ಆರಂಭದಲ್ಲಿ ಬ್ರಿಟನ್‌ನ ಥೇಮ್ಸ್‌್ ಡಿಟ್ಟನ್‌ನಲ್ಲಿನ ಥರ್ಮೊಸ್ಟ್ಯಾಟ್್ ಸಾಧನ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದರು. ೧೯೭೪ರಲ್ಲಿ ‘ಡೆಬೊನೇರ್’ ಸಂಪಾದಕರಾಗುವ ಮೂಲಕ ಪತ್ರಿಕಾ ರಂಗ ಪ್ರವೇಶಿಸಿದರು.
ದೇಶದ ಮೊದಲ ವಾರಪತ್ರಿಕೆ ‘ ದಿ ಸಂಡೇ ಅಬ್ಸರ್ವರ್’ ಶುರುಮಾಡಿದ್ದು ಕೂಡ ಇವರೇ. ‘ದಿ ಇಂಡಿಯಾ ಪೋಸ್ಟ್’, ‘ದಿ ಇಂಡಿಪೆಂಡೆಂಟ್’, ‘ದಿ ಪಯನಿಯರ್’ (ದೆಹಲಿ ಆವೃತ್ತಿ) ಪತ್ರಿಕೆಗಳ ಸಂಪಾದಕರಾಗಿ ಅವರು ಸವೆಸಿದ ಹಾದಿ ದೀರ್ಘವಾದುದು.
೯೦ರ ದಶಕದ ಆರಂಭದಲ್ಲಿ ದೆಹಲಿಗೆ ಬಂದ ಅವರು ‘ದಿ ಪಯನಿಯರ್’ ದೆಹಲಿ ಆವೃತ್ತಿಯ ಮೊದಲ ಸಂಪಾದಕರಾಗಿ ಕೆಲಸ ಮಾಡಿದರು. ಆದರೆ ಅವರು ದೀರ್ಘಕಾಲ (೧೭ ವರ್ಷ) ಕೆಲಸ ಮಾಡಿದ್ದು ‘ಔಟ್‌ಲುಕ್‌ನಲ್ಲಿ.
ನೇರ ನುಡಿಯ ಮೆಹ್ತಾ
ನೇರ ನುಡಿಯ ಮೆಹ್ತಾ ಅವರು ಒಬ್ಬ ಶ್ರೇಷ್ಠ ಪತ್ರಕರ್ತ ಹಾಗೂ ಬರಹಗಾರರಾಗಿ ನೆನಪಿನಲ್ಲಿ ಉಳಿಯುತ್ತಾರೆ.
– ಪ್ರಧಾನಿ ನರೇಂದ್ರ ಮೋದಿ
ನಾಯಿ ಅಂದರೆ ಪಂಚಪ್ರಾಣ...
ಮೆಹ್ತಾ ಅವರಿಗೆ ನಾಯಿ ಅಚ್ಚುಮೆಚ್ಚಿನ ಪ್ರಾಣಿ. ಅವರು ಸಾಕಿರುವ ಬೀದಿ ನಾಯಿಯ ಹೆಸರು ‘ಎಡಿಟರ್’. ‘ಔಟ್‌ಲುಕ್’ ಪತ್ರಿಕೆಯ ಅವರ ಅಂಕಣದಲ್ಲಿ ಅನೇಕ ಬಾರಿ ಈ ನಾಯಿಯ ಪ್ರಸ್ತಾಪ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.