ಬೆಂಗಳೂರು: ‘ಬಾಲಾಕೋಟ್ ವಾಯುದಾಳಿ ವೇಳೆ ಮೋಡ ಮುಸುಕಿದ ವಾತಾವರಣ ಇತ್ತು. ಹಾಗಾಗಿ, ನಮ್ಮ ವಿಮಾನಗಳನ್ನು ಪತ್ತೆ ಮಾಡಲು ಪಾಕಿಸ್ತಾನದ ರೇಡಾರ್‌ಗಳಿಗೆ ಸಾಧ್ಯವಿಲ್ಲ. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.
ನ್ಯೂಸ್ ನೇಷನ್ ಸುದ್ದಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ಇರುವ ವಿಡಿಯೊ ತುಣುಕನ್ನು ಗುಜರಾತ್‌ನ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
‘ರಾತ್ರಿ 1.30ರಿಂದ 2.15ರ ನಡುವೆ ದಾಳಿ ನಡೆಸುವುದು ಎಂದು ತೀರ್ಮಾನಿಸಲಾಗಿತ್ತು. ಅಂತಹ ದಾಳಿಗೆ ಆ ಸಮಯ ಅತ್ಯಂತ ಪ್ರಶಸ್ತವಾಗಿತ್ತು. 12ರ ಹೊತ್ತಿಗೆ ಅಧಿಕಾರಿಗಳು ಮತ್ತು ತಜ್ಞರ ಜತೆ ಪರಿಶೀಲನಾ ಸಭೆ ನಡೆಸಿದೆ. ಆಗ ಬಾಲಾಕೋಟ್ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿತ್ತು ಮತ್ತು ಮೋಡ ಕವಿದ ವಾತಾವರಣವಿತ್ತು. ‘ಸರ್, ಕಾರ್ಯಾಚರಣೆಯ ದಿನಾಂಕವನ್ನು ಬದಲಿಸೋಣ’ ಎಂದು ತಜ್ಞರು ಹೇಳಿದರು’ ಎಂದು ಮೋದಿ ಅವರು ಬಾಲಾಕೋಟ್ ಕಾರ್ಯಾಚರಣೆಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
‘ಮೋಡ ಕವಿದಿದೆ, ಮಳೆ ಬರುತ್ತಿದೆ. ನಾವು ಅಲ್ಲಿಗೆ ಹೋಗಲು ಸಾಧ್ಯವೋ, ಅಸಾಧ್ಯವೋ ಎಂಬ ಪ್ರಶ್ನೆ ತಲೆಯಲ್ಲಿ ಮೂಡಿತ್ತು. ನಾನು ಈ ವಿಜ್ಞಾನವನ್ನು ತಿಳಿದಿರುವ ವ್ಯಕ್ತಿ ಅಲ್ಲ ಎಂಬುದು ನನಗೆ ಗೊತ್ತಿತ್ತು. ಏನು ಮಾಡಬೇಕು ಎಂಬುದು ತಿಳಿಯದೆ ಎಲ್ಲರೂ ಗೊಂದಲದಲ್ಲಿ ಇದ್ದರು’ ಎಂದು ಅವರು ವಿವರಿಸಿದ್ದಾರೆ.
‘ಮೋಡಗಳಿವೆ, ಮಳೆ ಬರುತ್ತಿದೆ. ಇದು ನಮಗೆ ಅನುಕೂಲವಾಗಬಹುದು ಎಂದು ನನ್ನ ಸಾಮಾನ್ಯ ತಿಳುವಳಿಕೆ (ರಾ ವಿಸ್ಡಮ್) ಹೇಳಿತು. ಮೋಡಗಳು ಇರುವುದರಿಂದ ಪಾಕಿಸ್ತಾನದ ರೇಡಾರ್‌ಗಳು ನಮ್ಮ ಯುದ್ಧವಿಮಾನಗಳನ್ನು ಪತ್ತೆ ಮಾಡಲಾರವು ಎಂದು ನಾನು ಹೇಳಿದೆ. ಕಾರ್ಯಾಚರಣೆ ಮುಂದುವರಿಸಿ ಎಂದು ಆದೇಶಿಸಿದೆ. ಕಾರ್ಯಾಚರಣೆ ಯಶಸ್ವಿಯಾಯಿತು’ ಎಂದು ಮೋದಿ ಹೇಳಿದ್ದಾರೆ.
ಸೇನಾತಂತ್ರದ ವಿವರ ಬಹಿರಂಗ
ಬಾಲಾಕೋಟ್ ಕಾರ್ಯಾಚರಣೆಗೆ ಪೂರಕವಾಗಿ ಕೈಗೊಂಡಿದ್ದ ಸೇನಾ ಕಾರ್ಯತಂತ್ರದ ಮಾಹಿತಿಯನ್ನೂ ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿದ್ದಾರೆ.
‘ಬಾಲಾಕೋಟ್ ದಾಳಿಗೂ ಮುನ್ನ ನಮ್ಮ ನೌಕಾಪಡೆಯ ಯುದ್ಧನೌಕೆಗಳನ್ನು ಪಾಕಿಸ್ತಾನದ ಜಲಗಡಿಯ ಬಳಿ ಜಮೆ ಮಾಡಿದ್ದೆವು. ಆ ಸ್ಥಳ ಕರಾಚಿಗೆ ಸಮೀಪವಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಗರಬಡಿದಂತಾಗಿತ್ತು. ಭಾರತವು ಕರಾಚಿ ಮೇಲೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಭಾವಿಸಿತ್ತು. ಮಾಧ್ಯಮಗಳು ನಮ್ಮ ನಡೆಯ ಬಗ್ಗೆ ಗಮನಹರಿಸಬಾರದು ಎಂದು ಬಯಸಿದ್ದೆವು. ಮಾಧ್ಯಮಗಳೂ ಪಾಕಿಸ್ತಾನದ ಆಂತರಿಕ ವಿಚಾರಗಳತ್ತ ಗಮನಕೊಟ್ಟಿದ್ದವು. ಒಟ್ಟಾರೆ ಪಾಕಿಸ್ತಾನವನ್ನು ಗೊಂದಲದಲ್ಲಿ ಇರಿಸಿದ್ದೆವು. ಅದೇ ಸಂದರ್ಭದಲ್ಲಿ ಯಶಸ್ವಿಯಾಗಿ ವಾಯುದಾಳಿ ನಡೆಸಿದೆವು’ ಎಂದು ಮೋದಿ ಮಾಹಿತಿ ನೀಡಿದ್ದಾರೆ.
ಆಯೋಗಕ್ಕೆ ದೂರು, ವಿಪಕ್ಷಗಳ ಲೇವಡಿ
ಬಾಲಾಕೋಟ್ ದಾಳಿಗೆ ಸಂಬಂಧಿಸಿದಂತೆ ಸೇನಾತಂತ್ರ ಮತ್ತು ಕಾರ್ಯಾಚರಣೆ ವಿಧಾನದ ಮಾಹಿತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿರುವುದಕ್ಕೆ ವಿರೋಧ ಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿವೆ. ‘ಮೋಡಗಳು ಇರುವುದರಿಂದ ರೇಡಾರ್‌ಗಳು ಕೆಲಸ ಮಾಡುವುದಿಲ್ಲ’ ಎಂದು ಮೋದಿ ಹೇಳಿರುವ ಹೇಳಿಕೆಗೂ ಭಾರಿ ಆಕ್ಷೇಪ ವ್ಯಕ್ತವಾಗಿದೆ.
ಈ ಸಂಬಂಧ ಸಿಪಿಎಂ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
‘ಸೇನಾ ಕಾರ್ಯಾಚರಣೆಯ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸುವ ಮೂಲಕ ಮೋದಿ ಅವರು ಮತದಾರರನ್ನು ಪ್ರಭಾವಿಸಲು ಯತ್ನಿಸುತ್ತಿದ್ದಾರೆ.ಪದೇಪದೇ ನೀತಿ ಸಂಹಿತೆ ಉಲ್ಲಂಘನೆ ಮೂಲಕ ಮೋದಿ ಅವರು ಚುನಾವಣಾ ಆಯೋಗವನ್ನು ಅಣಕ ಮಾಡುತ್ತಿದ್ದಾರೆ ಅನಿಸುತ್ತಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕಾದ ತನ್ನ ಜವಾಬ್ದಾರಿಯನ್ನು ಆಯೋಗವು ಎತ್ತಿಹಿಡಿಯುತ್ತದೆ ಎಂದು ನಂಬಿದ್ದೇವೆ’ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸಿಪಿಎಂ ಹೇಳಿದೆ.
ವಾಯುಪಡೆ ಮತ್ತು ರಕ್ಷಣಾ ತಜ್ಞರ ಸಲಹೆಯನ್ನು ಧಿಕ್ಕರಿಸಿ, ದಾಳಿಗೆ ಮೋದಿ ಆದೇಶಿಸಿದ್ದರು. ಇದಕ್ಕಾಗಿಯೇ ಇರಬೇಕು ಬಾಲಾಕೋಟ್ ದಾಳಿ ವಿಫಲವಾಗಿದ್ದು
ಮೆಹಬೂಬಾ ಮುಫ್ತಿ,ಪಿಡಿಪಿ ಮುಖ್ಯಸ್ಥೆ
ಪಾಕಿಸ್ತಾನದ ರೇಡಾರ್‌ಗಳು ಮೋಡಗಳನ್ನು ಹಾದುಬರುವುದಿಲ್ಲ. ಈ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಭವಿಷ್ಯದಲ್ಲಿ ವಾಯುದಾಳಿ ನಡೆಸಲು ತೊಡಕಾಗುವುದಿಲ್ಲವೇ
ಒಮರ್ ಅಬ್ದುಲ್ಲಾ,ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ
ಮೋದಿಜೀ, ನೀವು ನೀರವ್ ಮೋದಿ, ಮೆಹುಲ್ ಭಾಯ್ (ಮೆಹುಲ್ ಚೋಕ್ಸಿ) ಮತ್ತು ವಿಜಯ್ ಮಲ್ಯ ಅವರೂ ಸೇರಿದಂತೆ ‘ಪಲಾಯನ’ ಯೋಜನೆ ರೂಪಿಸುವವರು ಎಂದು ನನಗೆ ಈಗ ಅರ್ಥವಾಯಿತು. ಅವರ‍್ಯಾರೂ ನಿಮ್ಮ ರೇಡಾರ್ ವ್ಯಾಪ್ತಿಯಲ್ಲಿ ಇರಲಿಲ್ಲವಾ. ನಿಮ್ಮ ಈ ಮಾತು ದೇಶದ ಭದ್ರತೆ ಬಗ್ಗೆ ನಿಮಗಿರುವ ಜ್ಞಾನ ಎಂಥದ್ದು ಎಂಬುದನ್ನು ತೋರಿಸುತ್ತದೆ
ರಾಜೀವ್ ಸತಾವ್,ಕಾಂಗ್ರೆಸ್ ವಕ್ತಾರ
ಚಂದ್ರಯಾನ ನಡೆಸಲು ಇಸ್ರೊ ತಯಾರಿರಲಿಲ್ಲ. ತಜ್ಞರಿಗೆ ಯೋಜನೆ ಬಗ್ಗೆ ಅನುಮಾನಗಳಿದ್ದವು. ನೋಡಿ, ಹುಣ್ಣಿಮೆಯಲ್ಲಿ ಕಾರ್ಯಾಚರಣೆ ನಡೆಸಿ. ಏಕೆಂದರೆ ಆಗ ಪೂರ್ಣಚಂದ್ರ ಇರುವುದರಿಂದ ನೌಕೆ ಇಳಿಯಲು ಹೆಚ್ಚು ಜಾಗ ಇರುತ್ತದೆ ಎಂದು ನಾನು ಅವರಿಗೆ ಹೇಳಿದೆ–ಪ್ರಧಾನಿ ವಿಜ್ಞಾನಿ ಮೋದಿ
ಡಾ.ಶುಭಂ ಮಿಶ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.