ನವದೆಹಲಿ (ಪಿಟಿಐ): ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಆರೆಸ್ಸೆಸ್ಸ್ ಯಾವುದೇ ಒತ್ತಡ ಹೇರುತ್ತಿಲ್ಲ. ಕೇಂದ್ರ ಸಚಿವರಿಗೆ ಸಂಪುಟದಲ್ಲಿ ಯಾವುದೇ ವಿಷಯವನ್ನು ಪ್ರಸ್ತಾಪಿಸುವ ಗರಿಷ್ಠ ಸ್ವಾತಂತ್ರ್ಯ ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ತಿಳಿಸಿದ್ದಾರೆ.
ಕೇಂದ್ರ ಸಂಪುಟದ ಹಿರಿಯ ಸಚಿವರು ಇತ್ತೀಚಿಗೆ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿಯಾಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ ಎಂದಿರುವ ಗಡ್ಕರಿ, ರಾಷ್ಟ್ರೀಯ ಭದ್ರತೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯು ಆಸಕ್ತಿ ತೋರಿದೆ ಎಂದಿದ್ದಾರೆ.
ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಗಡ್ಕರಿ ಆರೆಸ್ಸೆಸ್ಸ್‌ಗೆ ಆಪ್ತರು. ಆರೆಸ್ಸೆಸ್ಸ್ ಮುಖಂಡರ ಜತೆಗಿನ ಮಾತುಕತೆಯ ವೇಳೆ ರಾಜಕೀಯ ವಿಚಾರ ಚರ್ಚೆಯಾಗುವುದು ತುಂಬಾ ಕಡಿಮೆ ಎಂದು ಅವರು ತಿಳಿಸಿದ್ದಾರೆ.
‘ಭೇಟಿಯ ವೇಳೆ ನೀವು ಹೇಳುವುದನ್ನು ಆರೆಸ್ಸೆಸ್ಸ್ ಮುಖಂಡರು ಕೇಳಿತ್ತಾರೆ. ಬಳಿಕ ತಮಗನಿಸಿದ್ದನ್ನು ಹೇಳುತ್ತಾರೆ. ಅಂತಿಮವಾಗಿ ನಿಮಗೆ ಸರಿ ಕಂಡಿದ್ದನ್ನು ಮಾಡಿ ಎನ್ನುತ್ತಾರೆ’ ಎಂದು ಗಡ್ಕರಿ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮನೋಹರ್ ಪರಿಕ್ಕರ್, ರಾಜನಾಥ್ ಸಿಂಗ್ ಅವರಂಥ ಸಚಿವರು ಹಾಗೂ ಸ್ವಯಂ ತಾನು ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತರಾಗಿದ್ದೇವು. ತಾವೆಲ್ಲರೂ ಭಾಗವತ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಆದರೆ, ‘ಈ ಭೇಟಿಗಳ ಬಗ್ಗೆ ಮಾಧ್ಯಮಗಳು ಬರೆಯುವ ಒಂದಂಶದಿಂದ ಅವರಿಗೇನೂ ಆಗಬೇಕಿಲ್ಲ’ ಎಂದಿದ್ದಾರೆ.
‘ನಾನು ಸಂಘದ ಸದಸ್ಯ. ಹೀಗೆ ಹೇಳಲು ನನಗೆ ಹೆದರಿಕೆ ಇಲ್ಲ. ಸಂಘವು ನನ್ನ ಜೀವನದ ಭಾಗ. ಪರಿಕ್ಕರ್ ಹಾಗು ರಾಜನಾಥ್ ಸಿಂಗ್ ಅವರಿಗೂ ಅದು ಅಂತೆಯೇ. ಸಂಘ ಪರಿವಾರ ನಮ್ಮ ಮೇಲೆ ಯಾವುದೇ ಒತ್ತಡ ಹೇರುವುದಾಗಲಿ ನಿರ್ದೇಶನ ನೀಡುವುದಾಗಲಿ ಮಾಡಿಲ್ಲ’ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ಪ್ರಧಾನಿ ಮೋದಿ ಅವರ ಕಾರ್ಯಶೈಲಿ ಬಗ್ಗೆಯ ಕೆಲ ಬಿಜೆಪಿ ನಾಯಕರು ಆರೆಸ್ಸೆಸ್ಸ್‌ಗೆ ದೂರು ನೀಡಿದ್ದರು ಎಂಬ ವರದಿಯನ್ನು ಗಡ್ಕರಿ ಅಲ್ಲಗಳೆದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇತ್ತೀಚೆಗೆ ಭಾಗವತ್ ಅವರನ್ನು ಭೇಟಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.