ನವದೆಹಲಿ (ಪಿಟಿಐ): ತುರ್ತು ಸಂದರ್ಭಗಳಲ್ಲಿ ಯುದ್ಧ ವಿಮಾನಗಳನ್ನು ಹೆದ್ದಾರಿಗಳ ಮೇಲೆ ಇಳಿಸುವ ನೂತನ ಪ್ರಯೋಗಕ್ಕೆ ಇಂದು ಯಮುನಾ ಎಕ್ಸಪ್ರೆಸ್ ಹೆದ್ದಾರಿ ಸಾಕ್ಷಿಯಾಯಿತು.
ಮಥುರಾ ಸಮೀಪದಲ್ಲಿರುವ ಎಂಟು ಪಥಗಳ ಯುಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ 6.40ಕ್ಕೆ ಭಾರತೀಯ ಸೇನೆಗೆ ಸೇರಿದ ಮಿರಾಜ್ 2000 ಯುದ್ಧ ವಿಮಾನ ಯಶಸ್ವಿಯಾಗಿ ಹೆದ್ದಾರಿ ಮೇಲೆ ಇಳಿಯಿತು. ಇದು ಭಾರತದಲ್ಲಿ ನಡೆದ ಮೊದಲ ಯಶಸ್ವಿ ಪ್ರಯೋಗವಾಗಿದೆ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭವಿಷ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಹೆದ್ದಾರಿಗಳ ಮೇಲೆ ಇಳಿಸುವುದಕ್ಕೆ ಈ ಪ್ರಯೋಗ ಸಹಕಾರಿಯಾಗಲಿದೆ. ಕೆಲ ನಿಮಿಷಗಳ ಕಾಲ ರಸ್ತೆಯ ಮೇಲಿಂದ 15 ರಿಂದ 20 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ವಿಮಾನ ನಂತರ ಯಶಸ್ವಿಯಾಗಿ ರಸ್ತೆಯ ಮೇಲೆ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಾಯೋಗಿಕ ಪರೀಕ್ಷೆಗೆ ಮಥುರಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಹಕಾರ ನೀಡಿದರು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.