ಮೂವತ್ತೆರಡು ವರ್ಷಗಳಷ್ಟು ಕಾಲದ ವರದಿಗಾರನ ಕಸುಬಿನಲ್ಲಿ ಇಪ್ಪತ್ತು ವರ್ಷಗಳನ್ನು ದಿಲ್ಲಿಯಲ್ಲೇ ಸವೆಸಿದ ಕಾರಣ ಗೌರಿ ಲಂಕೇಶ್ ಅವರ ಸಂಪರ್ಕ ನನಗೆ ಕೆಲ ಕಾಲ ಹತ್ತಿರದ್ದು ಮತ್ತು ಬಹುಕಾಲ ದೂರದ್ದೂ ಆಗಿ ಉಳಿಯಿತು.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನಿತ್ಯದ ಅಸೈನ್ಮೆಂಟುಗಳಲ್ಲಿ ಆಗಾಗ ಸಿಗುತ್ತಿದ್ದ ಗೌರಿ ಅತ್ಯಂತ ನಿಗರ್ವಿಯೂ, ಸರಳ ಸ್ವಭಾವದವರೂ ಹಾಗೂ ಸ್ನೇಹಪರರೂ ಆಗಿ ಕಂಡುಬಂದಿದ್ದರು.
ಇಂಗ್ಲಿಷ್ ಪತ್ರಕರ್ತರು ಸಾಧಾರಣವಾಗಿ ಕನ್ನಡ ಪತ್ರಕರ್ತರಿಂದ ಕಾಯ್ದುಕೊಳ್ಳುತ್ತಿದ್ದ ದೂರದಲ್ಲಿ, ಎಬ್ಬಿಸಿ ನಿಲ್ಲಸಿಕೊಳ್ಳುತ್ತಿದ್ದ ಕೃತಕ ಗೋಡೆಗಳಲ್ಲಿ ಅವರಿಗೆ ಕಿಂಚಿತ್ತೂ ನಂಬಿಕೆ ಇರಲಿಲ್ಲ. ಎಂಬತ್ತರ ದಶಕದ ಮಧ್ಯಭಾಗದ ವರ್ಷಗಳು. ಆ ಹೊತ್ತಿಗಾಗಲೆ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಪದವೀಧರೆ. ಜೆ.ಎನ್.ಯು.ವಿನ ಸಮಸಮಾಜದ ಆಶಯದ ಗಾಳಿ ಗಂಧ ತಾಕಿದ್ದವರು.
ತಂದೆಯ ನೆರಳಿನಿಂದ ದೂರ ಉಳಿದು ಬೆಳೆಯಲೆಂದೇ ಇಂಗ್ಲಿಷ್ ಪತ್ರಿಕೋದ್ಯಮವನ್ನು ಆಯ್ದುಕೊಂಡಿದ್ದರು. ಮಿಡ್ ಡೇ, ಸಂಡೇ ನಿಯತಕಾಲಿಕಗಳು, ಟೈಮ್ಸ್ ಆಫ್ ಇಂಡಿಯಾ, ಈ ಟಿವಿ, ನ್ಯೂಸ್ ಟೈಂ, ಹೆಡ್‌ಲೈನ್ಸ್ ಟುಡೆ ಟೀವಿಯಲ್ಲಿ ತಮ್ಮ ವರದಿಗಾರಿಕೆಯನ್ನು ಚೂಪುಗೊಳಿಸಿಕೊಂಡವರು.
ದೆಹಲಿಯಲ್ಲಿ ಹಲವು ವರ್ಷ ಕೆಲಸ ಮಾಡಿದ ಅವರು, ಮುಂದೊಂದು ದಿನ ತಾವೇ ಬಹು ದೊಡ್ಡ ದುರಂತದ ಸುದ್ದಿಯಾಗಿ ದೇಶದ ಗಮನವನ್ನು ಸೆಳೆದಾರೆಂಬ ಕಲ್ಪನೆ, ಆಕೆಯನ್ನು ಬಲ್ಲ ಯಾವ ಕನ್ನಡಿಗನಿಗೂ ಇರಲಿಕ್ಕಿಲ್ಲ.
90ರ ದಶಕದ ಅಂತ್ಯದಲ್ಲಿ ತಂದೆಯ ಅನಾರೋಗ್ಯದ ಕಾರಣ ಕಣ್ಣೀರುಗರೆಯುತ್ತಲೇ ಬೆಂಗಳೂರು ವಿಮಾನ ಹತ್ತಿದವರು ಮತ್ತೆ ಬರಲಿಲ್ಲ. ಬೆಂಗಳೂರು ಅವರನ್ನು ಕಟ್ಟಿ ಹಾಕಿತ್ತು. ತಂದೆಯ ನಿಧನದ ನಂತರ ಲಂಕೇಶ್ ಪತ್ರಿಕೆಯ ಸೂತ್ರ ಹಿಡಿದಾಗ ಕನ್ನಡದಲ್ಲಿ ಬರೆಯಲು ಬಲು ಹೆಣಗಾಡಿದರು. ಇಂಗ್ಲಿಷಿನಿಂದ ಹಠಾತ್ತನೆ ಕನ್ನಡಕ್ಕೆ ಹೊರಳುವುದು ಕಬ್ಬಿಣದ ಕಡಲೆಯೇ ಆಗಿತ್ತು.
ತಂದೆ ಆರಂಭಿಸಿದ ಪತ್ರಿಕೆ 2005ರಲ್ಲಿ ತಮ್ಮನ ಪಾಲಾದಾಗ ಧೃತಿಗೆಡಲಿಲ್ಲ. ಕುಟುಂಬ ಮತ್ತು ಪ್ರಭುತ್ವದ ದಾಳಿಯಿಂದ ಕಂಗೆಟ್ಟರೂ ಕೂಡಲೇ ಚೇತರಿಸಿಕೊಂಡರು. 2005ರ ಮಾರ್ಚ್ ಎಂಟರಂದು ಮಿತ್ರವರ್ಗದ ನೆರವಿನೊಂದಿಗೆ ಎ.ಡಿ.ಎ.ರಂಗಮಂದಿರದಲ್ಲಿ ‘ಗೌರಿ ಲಂಕೇಶ್’ ಪತ್ರಿಕೆಯ ಚೊಚ್ಚಲ ಸಂಚಿಕೆಯನ್ನು ಬಿಡುಗಡೆ ಮಾಡಿದಾಗ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಉತ್ಸಾಹಿಗಳು ಸಂಭ್ರಮಿಸಿ ಸ್ವಾಗತಿಸಿದರು.
ಕಾಲಾನುಕ್ರಮದಲ್ಲಿ ಬರೆಯಲು ಮಾತ್ರವೇ ಅಲ್ಲ, ಕನ್ನಡದಲ್ಲಿ ಆಲೋಚಿಸಲೂ ಕಲಿತರು. ‘ಕಂಡದ್ದು ಕಂಡ ಹಾಗೆ’ ಶೀರ್ಷಿಕೆಯಡಿ ಅವರು ಬರೆದ ಸಂಪಾದಕೀಯ ಸರಳ ಸಂವಹನಕ್ಕೆ ಮಾದರಿಯಾಗಿ ರೂಪುಗೊಂಡಿತು ಹೊಸ ಪತ್ರಿಕೆ ಪತ್ರಿಕೆಯಷ್ಟೇ ಆಗಿ ಉಳಿಯಲಿಲ್ಲ. ಅದೊಂದು ಚಳವಳಿಯಾಗಿ ಬೆಳೆಯಿತು. ಗೌರಿಯವರನ್ನೂ ಬೆಳೆಸಿತು.
ಅವರ ಅಂತರಂಗವನ್ನು ಅರಳಿಸಿತು ತುಂಟತನ, ಜೀವಕಾರುಣ್ಯ, ಜೀವನಪ್ರೀತಿ ಅವರನ್ನು ಸುತ್ತಮುತ್ತಲ ಕನ್ನಡ ಸಮಾಜದೊಂದಿಗೆ ಮತ್ತಷ್ಟು ಗಟ್ಟಿಯಾಗಿ ಬಸೆಯಿತು. ಅವರ ಓರಗೆಯ ಯಾವ ಪತ್ರಕರ್ತರಿಗೂ ಇಲ್ಲದಷ್ಟು ಸಲಿಗೆಯಿಂದ ಯುವಪೀಳಿಗೆ ಅವರೊಂದಿಗೆ ಸಂವಾದಿಸುತ್ತಿತ್ತು. ಅವರ ವಾತ್ಸಲ್ಯವನ್ನು ಸವಿದಿತ್ತು. ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೈದ್ಧಾಂತಿಕ ಭೇದಗಳನ್ನು ಮರೆತು ಅವರ ಕುರಿತು ಹರಿದ ಅಶ್ರುತರ್ಪಣವೇ ಈ ಮಾತಿಗೆ ಸಾಕ್ಷಿ.
ತಂದೆಯ ಮಹಾನ್ ಪ್ರತಿಭೆ ಆಕೆಗೆ ಇರಲಿಲ್ಲ ನಿಜ. ಆದರೆ ತಂದೆ ಪ್ರತಿಪಾದಿಸಿದ ಜನಪರ ವಿಚಾರಧಾರೆಯನ್ನು ಎತ್ತಿ ಹಿಡಿಯುವ ಉತ್ಸಾಹದಲ್ಲಿ ಅವರು ಎಂದೂ ಹಿಂದೆ ಬೀಳಲಿಲ್ಲ. ಬದಲಾಗಿ ಅದರ ವ್ಯಾಪ್ತಿ ವೈಶಾಲ್ಯವನ್ನು ಇನ್ನಷ್ಟು ಹಿಗ್ಗಿಸಿದರೇ ವಿನಹ ಕುಗ್ಗಿಸಲಿಲ್ಲ. ಸಂಪಾದಕೀಯ ಕೋಣೆಗಷ್ಟೇ ಸೀಮಿತವಾಗುವ ಪತ್ರಕರ್ತರಾಗಿ ಉಳಿಯಲಿಲ್ಲ ಅವರು. ಬರೆದರಷ್ಟೇ ತನ್ನ ಜವಾಬ್ದಾರಿ ತೀರಿತು ಎಂಬ ನಿಲುವಿನಿಂದ ಹೊರ ಜಿಗಿದು ಜನಾಂದೋಲನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡದ್ದು ಗೌರಿಯವರ ವಿಶೇಷ.
ಅನ್ಯಾಯ, ಅಟ್ಟಹಾಸ, ಕೋಮುವಾದಿ ಕಾರ್ಯಸೂಚಿಗಳು ತಲೆಯೆತ್ತಿದಲ್ಲೆಲ್ಲ ಗೌರಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಲಾಭ ನಷ್ಟಗಳನ್ನು ಅಳೆದು ತೂಗಿ ಮಾತಾಡಲಿಲ್ಲ. ಸಮಾಜಜೀವನದ ನರನಾಡಿಗಳಿಗೆ ನಂಜನ್ನು ಬೆರೆಸುವ ವ್ಯಕ್ತಿಗಳು ಶಕ್ತಿಗಳು ಸಂಸ್ಥೆಗಳನ್ನು ನೇರವಾಗಿ ಸ್ಪಷ್ಟವಾಗಿ ಕಟುಮಾತುಗಳಲ್ಲಿ ಖಂಡಿಸಿದರು.
ಅಂಚಿನಲ್ಲಿದ್ದ ಕೋಮುವಾದಿ ರಾಜಕಾರಣ ಮಧ್ಯಭೂಮಿಕೆಯನ್ನು ಆಕ್ರಮಿಸಿಕೊಂಡ ನಂತರ ಆಕೆಯ ದನಿ ಗಟ್ಟಿಯಾಯಿತೇ ವಿನಾ ಕ್ಷೀಣವಾಗಲಿಲ್ಲ. ಲಂಕೇಶರು ನಂಬಿದ್ದಲೋಹಿಯಾವಾದಿ-ಸಮಾಜವಾದ, ಗಾಂಧೀ ವಾದದ ಆಚೆಗೂ ಸರಿದ ಗೌರಿ, ಎಡಪಂಥೀಯ ವಿಚಾರಧಾ ಯನ್ನು ದೂರ ಇರಿಸಲಿಲ್ಲ.
ದಲಿತರು ಮತ್ತು ಎಡಪಂಥೀಯರನ್ನು ತಾವು ನಡೆಸಿದ ಪತ್ರಿಕೆಯಲ್ಲಿ ತಂದೆಗಿಂತ ಹೆಚ್ಚುಹತ್ತಿರ ವಿಟ್ಟುಕೊಂಡು ಆಂದೋಲನಗಳಲ್ಲೂ ಗುರುತಿಸಿಕೊಂಡರು.
ಪತ್ರಕರ್ತೆಯೊಬ್ಬಳು ವಿದ್ಯಮಾನಗಳನ್ನು ನಿರ್ಲಿಪ್ತ ದೂರ ನಿಂತು ನೋಡಿ ವರದಿ ಮಾಡಬೇಕು ಎಂಬ ಸಾಂಪ್ರದಾಯಿಕ ನಂಬಿಕೆ- ಮಡಿವಂತಿಕೆಯನ್ನು ಒದ್ದು ತಳ್ಳಿದ ಮೊದಲಿಗರು. ತಮ್ಮನ್ನು 'ಆ್ಯಕ್ಟಿವಿಸ್ಟ್ ಜರ್ನಲಿಸ್ಟ್' ಎಂದು ಹೆಮ್ಮೆಯಿಂದ ಕರೆದುಕೊಂಡರು. ಪ್ರಚಂಡ ಕೋಮುವಾದಿ ಫ್ಯಾಸಿಸ್ಟ್ ರಾಜಕೀಯ ಎದುರಾಳಿಯ ಎದುರು ದಲಿತರ ನೀಲಿ ಮತ್ತು ಎಡಪಂಥೀಯರ ಕೆಂಪು ರಂಗುಗಳು ಎಲ್ಲ ಮತಭೇದವನ್ನೂ ಬದಿಗಿಟ್ಟು ಒಂದಾಗಬೇಕೆಂಬುದು ಅವರ ಅಚಲ ನಂಬಿಕೆಯಾಗಿತ್ತು. ಈ ಎರಡೂ ರಂಗುಗಳ ನಡುವೆ ನಡೆದ ವೈಚಾರಿಕ ಕದನಗಳು ಆಕೆಯ ಮನಸ್ಸನ್ನು ಇತ್ತೀಚಿನ ದಿನಗಳಲ್ಲಿ ಗಾಸಿಗೊಳಿಸಿದ್ದು ಹೌದು.
ನೀಲಿ ಮತ್ತು ಕೆಂಪು ಎರಡರ ಗೌರವವನ್ನೂ ಸಂಪಾದಿಸಿಕೊಂಡ ಪ್ರೀತಿ ವಾತ್ಸಲ್ಯದ ‘ಅಮ್ಮ’ನಾಗಿ ಹೊರಹೊಮ್ಮಿದ್ದರು. ಅಲ್ಪಸಂಖ್ಯಾತರ ಕುರಿತು ತಂದೆ ಯದೇ ಬದ್ಧತೆ ಅವರಿಗಿತ್ತು. ಕನ್ಹಯ್ಯಕುಮಾರ್, ಮತ್ತು ಜಿಗ್ನೇಶ್ ಮೇವಾನಿ, ಶೆಹ್ಲಾ ರಷೀದ್ ಅವರನ್ನು ತಮ್ಮ ದತ್ತುಮಕ್ಕಳೆಂದು ಎಂದು ಬಹಿರಂಗವಾಗಿ ಕರೆದುಕೊಂಡಿದ್ದರು.
ಕೆಲ ತಿಂಗಳುಗಳ ಹಿಂದೆ ದೆಹಲಿಗೆ ಬಂದಿದ್ದಾಗ ಕನ್ಹಯ್ಯನಿಗೆ ಹೊಸ ಉಡುಪುಗಳ ಉಡುಗೊರೆ ತಂದಿದ್ದುಂಟು. ತಂದೆ ಲಂಕೇಶ್ ಎದುರಿಸಿದ್ದಕ್ಕಿಂತ ಬಹು ಕಷ್ಟದ ದಿನಗಳನ್ನು ಗೌರಿ ಎದುರಿಸಿದ್ದು ಎಲ್ಲರಿಗೂ ಕಾಣಿಸಿದ ಕಟು ಸತ್ಯ. ಪತ್ರಿಕೆ ನಡೆಸಲು ಉಂಟಾದ ಹಣದ ಕೊರತೆಯನ್ನು ತುಂಬಿಕೊಳ್ಳಲು ಗೈಡ್ ಮತ್ತು ಉದ್ಯೋಗವಾರ್ತೆಯಂತಹ ಪತ್ರಿಕೆಗಳನ್ನು ತಂದರು.ಅವುಗಳ ಲಾಭದ ಹಣವನ್ನು ಪತ್ರಿಕೆಗೆ ಹರಿಸಿದರು.
2002ರಲ್ಲಿ ಬಾಬಾಬುಡನ್ ಗಿರಿ ಆಂದೋಲನಕ್ಕೆ ಧುಮುಕಿದಾಗಿನ ಗೌರಿ ಮತ್ತು 2017 ಗೌರಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಗುರುತಿಸುತ್ತಾರೆ ಅವರೊಂದಿಗೆ ಈ ಪಯಣದಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಶಿವಸುಂದರ್. ಈ ಹದಿನೈದು ವರ್ಷಗಳಲ್ಲಿ ಗೌರಿ ಸಂಪೂರ್ಣವಾಗಿ ರೂಪಾಂತರ ಹೊಂದಿದ್ದರು.
ಕೋಮು ಸೌದಾರ್ದ ವೇದಿಕೆಯ ಹೋರಾಟಗಳು ಅವರ ಚಿಂತನೆಯನ್ನು ಮಾಗಿಸಿತು. ಪ್ರಗತಿಪರ ಸೆಕ್ಯುಲರ್ ವಾದಿಗಳಲ್ಲಿ ಸಾಮಾನ್ಯವಾಗಿ ಕಾಣದಿರುವ ದಲಿತಪ್ರಜ್ಞೆ ಮತ್ತು ಮಹಿಳಾ ಸಂವೇದನೆಯನ್ನು ಅವರು ಮೈಗೂಡಿಸಿಕೊಂಡರು. ‘ಪಾಂಚಾಲಿ’ ಮತ್ತು ‘ಸಾವಂತ್ರಿ’ ಹೆಸರಿನಲ್ಲಿ ಅವರು ಬರೆದದ್ದು ಅನುವಾದಿಸಿದ್ದೆಲ್ಲ ಮಹಿಳಾ ಸಂವೇದನೆಯ ಬರೆಹಗಳೇ. ಅಂಬೇಡ್ಕರ್ ಅವರನ್ನು ವಿಶೇಷವಾಗಿ ಅಧ್ಯಯನ ಮಾಡಿ. ತಮ್ಮನ್ನು ಅಂಬೇಡ್ಕರ್ ವಾದಿಯೆಂದು ಕರೆದುಕೊಂಡರು. ಅಂಬೇಡ್ಕರ್ ಅವರನ್ನು ತಾವು ಇಷ್ಟು ಕಾಲ ಮರೆತದ್ದೇಕೆ ಎಂದು ಆತ್ಮವಿಮರ್ಶೆ ಮಾಡಿಕೊಂಡರು.
‘ಸಿಟಿಜನ್ಸ್ ಇನಿಷಿಯೇಟಿವ್ ಫಾರ್ ಪೀಸ್’ ಮೂಲಕ ನಕ್ಸಲೀಯರನ್ನು ಮುಖ್ಯ ಸಮಾಜವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಹತ್ಯೆಯಿಂದ ಯಾರಿಗೆ ಲಾಭವಾಗಿದೆ ಎಂದು ಯೋಚಿಸುವುದು ಬಹಳ ಮುಖ್ಯ. ಲಂಕೇಶ್, ನಂಜುಂಡಸ್ವಾಮಿ, ತೇಜಸ್ವಿ, ರಾಮದಾಸ್, ಅನಂತಮೂರ್ತಿ, ಕಲಬುರ್ಗಿ ಅವರ ನಿರ್ಗಮನದಿಂದ ಉಂಟಾಗಿರುವ ಶೂನ್ಯ, ಗೌರಿ ನಿಧನದಿಂದ ಇನ್ನಷ್ಟು ದೊಡ್ಡದಾಗಿ ಕಾಣತೊಡಗಿದೆ. ಆದರೆ ಎಲ್ಲ ಅತಿರೇಕಗಳಿಗೂ ಅಂತ್ಯವಿದೆ ಎಂಬುದನ್ನು ಇತಿಹಾಸದ ಪಾಠಗಳು ನಿಚ್ಚಳವಾಗಿ ಸಾರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.