ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿಗೆ ಯುಪಿಎ ಸರ್ಕಾರ ಬೆಚ್ಚಿದೆ. ವಾರದಿಂದ ‘ಕೋಮಾ’ದಲ್ಲಿದ್ದ ಕಳಂಕಿತ ಸಂಸದರು, ಶಾಸಕರನ್ನು ಅನರ್ಹತೆಯಿಂದ ರಕ್ಷಿಸುವ ಸುಗ್ರೀವಾಜ್ಞೆಯನ್ನು ಹಿಂದೆ ಪಡೆಯಲು ಕೊನೆಗೂ ನಿರ್ಧರಿಸಿದೆ. ಇದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಮಂಡಿಸಿರುವ ಈ ಸಂಬಂಧದ ಮಸೂದೆಯೂ ನೇಪಥ್ಯಕ್ಕೆ ಸರಿಯಲಿದೆ.
ಒಂದು ವಾರದ ಹಿಂದೆ ರಾಹುಲ್ ದಿಢೀರನೆ ‘ದೆಹಲಿ ಪ್ರೆಸ್‌ಕ್ಲಬ್’ನಲ್ಲಿ ಪ್ರತ್ಯಕ್ಷವಾಗಿ ಸುಗ್ರೀವಾಜ್ಞೆ ವಿರುದ್ಧ ದನಿ ಎತ್ತಿದಾಗಲೇ ಬಹುತೇಕ ಅದರ ಕಥೆ ಮುಗಿದಿತ್ತು. ಸಂಪುಟ ಔಪಚಾರಿಕವಾಗಿ ತೀರ್ಮಾನ ಮಾಡುವ ಪ್ರಕ್ರಿಯೆ ಮಾತ್ರ ಉಳಿದಿತ್ತು. ಮಂಗಳವಾರ ರಾತ್ರಿ ವಿದೇ ಶದಿಂದ ಹಿಂತಿರುಗಿದ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ವಿವಾದಿತ ಸುಗ್ರೀವಾಜ್ಞೆಗೆ ಎಳ್ಳು, ನೀರು ಬಿಟ್ಟರು.
ಮನಮೋಹನ್ ಸೋಲು: ಸರ್ಕಾರದ ತೀರ್ಮಾನ ದಿಂದ ರಾಹುಲ್ ವೈಯಕ್ತಿಕವಾಗಿ ಗೆದ್ದಿದ್ದಾರೆ. ಅವರ ಪಕ್ಷ ಮತ್ತು ಸರ್ಕಾರ ಸೋತಿದೆ. ಇದು ಮನಮೋಹನ್ ಸಿಂಗ್ ಅವರ ಸೋಲು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಾಧ್ಯಮಗಳು ರಾಹುಲ್ ವರ್ಸಸ್ ಮನಮೋಹನ್ ಎಂದೇ ಬಿಂಬಿಸುತ್ತಿವೆ. ರಾಹುಲ್ ನಡವಳಿಕೆ ಪ್ರಧಾನಿಗೆ ಬೇಸರ ಹುಟ್ಟಿಸಿರಬಹುದು. ಆದರೆ ಅವರು ಸಂಘರ್ಷ ಕ್ಕಿಳಿಯುವವರಲ್ಲ. ಸಂಘರ್ಷದ ಮನಸ್ಥಿತಿ ಅವರಿಗಿದ್ದರೆ ಇಷ್ಟೊಂದು ದಿನ ಆ ಸ್ಥಾನದಲ್ಲಿ ಇರುತ್ತಿರಲಿಲ್ಲ ಎನ್ನುವುದು ನಿರ್ವಿವಾದ.
ಬೇಸರ ತಂದ ರಾಹುಲ್ ವರ್ತನೆ: ಕಾಂಗ್ರೆಸ್ ಮಿತ್ರ ಪಕ್ಷಗಳಿಗೂ ರಾಹುಲ್ ವರ್ತನೆ ಬೇಸರ ತಂದಿದೆ. ಸಚಿವ ಶರದ್ ಪವಾರ್ ಸಂಪುಟ ಸಭೆಯಲ್ಲಿ ಖಾರವಾಗಿ ಮಾತನಾಡಿದ್ದಾರೆ. ಇನ್ನು ಮುಂದೆ ಏನೇ ತೀರ್ಮಾನ ಮಾಡುವ ಮೊದಲು ನಿಮ್ಮ ನಾಯಕರನ್ನು ಕೇಳಿ ಕೊಂಡು ಬನ್ನಿ ಎಂದು ಹೇಳಿದ್ದಾರೆ. ಆದರೆ, ಬಹಿರಂಗ ವಾಗಿ ಸಂಘರ್ಷಕ್ಕೆ ಇಳಿಯುವ ಧೈರ್ಯ ಅವರಿಗೂ ಇಲ್ಲ. ಸಚಿವ ಸಂಪುಟ ಸಭೆ ತೀರ್ಮಾನವೇ ಇದಕ್ಕೆ ಸಾಕ್ಷಿ.
ಕಳಂಕಿತ ಸಂಸದರು ಮತ್ತು ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಕುರಿತು ಜುಲೈ 10ರಂದು ಸುಪ್ರೀಂ ಕೋರ್ಟ್ ಪ್ರಕಟಿಸಿದ ತೀರ್ಪಿನಿಂದ ರಾಜಕೀಯ ಪಕ್ಷಗಳ ಕಣ್ಣು ಕೆಂಪಾಯಿತು. ಈ ತೀರ್ಪನ್ನು ಬದಿಗೊತ್ತಲು ಪ್ರಜಾ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ವಿಪರೀತ ಒತ್ತಡ ಬಂತು.
ಕೋರ್ಟ್ ತೀರ್ಪಿಗೆ ರಾಜಕೀಯ ಪಕ್ಷಗಳು ಹೆದರಿದ್ದು ಏಕೆ ಎಂಬ ಸತ್ಯ ಎಂಥವರಿಗೂ ಸರಳವಾಗಿ ಅರ್ಥ ವಾಗುತ್ತದೆ. ಕಳೆದ ಕೆಲ ವರ್ಷಗಳಿಂದ ನಡೆದಿರುವ ಭ್ರಷ್ಟಾಚಾರ ಹಗರಣದಲ್ಲಿ ಯಾವ್ಯಾವ ಪಕ್ಷಗಳ ಮುಖಂಡರು ಭಾಗಿಯಾಗಿದ್ದಾರೆಂದು ಬೆಟ್ಟು ಮಾಡ ಬೇಕಾದ ಅಗತ್ಯವಿಲ್ಲ.
ಆಗಸ್ಟ್ ಮೊದಲ ವಾರ ಮತ್ತು ಎರಡನೇ ವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲು ಎಡ ಪಕ್ಷಗಳು ಹಾಗೂ ಬಿಜೆಡಿ ಮಾತ್ರ ವಿರೋಧ ವ್ಯಕ್ತಪಡಿಸಿದ್ದವು. ಉಳಿದೆಲ್ಲ ಪಕ್ಷಗಳು ತಿದ್ದುಪಡಿ ಪರವಾಗಿದ್ದವು. ಕೊನೇ ವಾರ ಈ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ ಆಯಿತು. ಅಲ್ಲಿ ಯವರೆಗೂ ಏನೂ ಸಮಸ್ಯೆ ಇರಲಿಲ್ಲ. ಸಮಸ್ಯೆ ಶುರು ವಾಗಿದ್ದು ಸೆಪ್ಟೆಂಬರ್ 24 ರ ಬಳಿಕ. ಕಳಂಕಿತ ಸಂಸದರ ರಕ್ಷಣೆಗೆ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾದ ನಂತರ.
ಬಿಜೆಪಿ ಸುಗ್ರೀವಾಜ್ಞೆಗೆ ಆಕ್ಷೇಪ ಎತ್ತಿತು. ಅನಂತರ ಸರ್ಕಾರದ ಆತುರದ ಕ್ರಮವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಶ್ನಿಸಿದರು. ಈ ಹಂತದಲ್ಲಿ ರಾಹುಲ್ ಮಧ್ಯ ಪ್ರವೇಶ ಮಾಡಿದರು. ಇದು ಶುದ್ಧ ಅವಿವೇಕದ ಕೆಲಸ. ಸುಗ್ರೀವಾಜ್ಞೆ ಹರಿದು ಬಿಸಾಡಲು ಯೋಗ್ಯ ಎಂದು ಕಿಡಿ ಕಾರಿದರು. ರಾಹುಲ್ ಉದ್ದೇಶವನ್ನು ಯಾರೂ ಪ್ರಶ್ನಿಸಲಾಗದು. ಆದರೆ, ಬಳಸಿದ ಭಾಷೆ, ಉಪಯೋಗಿಸಿಕೊಂಡ ವೇದಿಕೆ ಮತ್ತು ಸಂದರ್ಭ ಮಾತ್ರ ವ್ಯಾಪಕವಾಗಿ ಟೀಕೆಗೊಳಗಾಯಿತು.
ರಾಹುಲ್ ಗಾಂಧಿ ತಮ್ಮ ಮನೆಯೊಳಗೇ ಸಮಸ್ಯೆ ಯನ್ನು ಬಗೆಹರಿಸಬಹುದಿತ್ತು. ಈ ಸುಗ್ರೀವಾಜ್ಞೆಯನ್ನು ಬೀದಿಗೆ ಬಂದು ಟೀಕಿಸಬೇಕಾದ ಅಗತ್ಯವಿರಲಿಲ್ಲ. ತಮ್ಮ ತಾಯಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾ ಸಕ್ಕೆ ಪ್ರಧಾನಿ ಅವರನ್ನು ಕರೆಸಿಕೊಂಡು ಮಾತನಾಡ ಬಹುದಿತ್ತು. ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್ ಪ್ರಮು ಖರ ಸಮಿತಿ ಸಭೆ ಸೇರಿದ್ದ ತಕ್ಷಣವೇ ಈ ಕೆಲಸ ಮಾಡಿ ದ್ದರೆ ಎಲ್ಲರನ್ನು ಮುಜುಗರದಿಂದ ಪಾರು ಮಾಡ ಬಹುದಿತ್ತು.
ಗಾಂಧಿ ಕುಟುಂಬದ ನಡವಳಿಕೆಯೇ ಹೀಗೆ. ರಾಹುಲ್ ಗಾಂಧಿ ಮಾತ್ರವಲ್ಲ. ಹಿಂದೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಅನೇಕ ಸಂದರ್ಭದಲ್ಲಿ ಹೀಗೆ ನಡೆದು ಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ನಡೆದು ಕೊಂಡು ಬಂದಿರುವುದು ಇದೇ ರೀತಿ. ಎಲ್ಲಕ್ಕೂ ಅದು ಒಗ್ಗಿಕೊಂಡುಬಿಟ್ಟಿದೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ಅಧಿಕಾರ ಪ್ರದರ್ಶನವಾಗಿದೆ.
ರಾಹುಲ್ ಗಾಂಧಿ ಹಾದಿಯಲ್ಲಿ ಪಕ್ಷ ಹೆಜ್ಜೆ ಹಾಕಿದೆ. ರಾಹುಲ್ ಕಾಂಗ್ರೆಸ್ ಪಕ್ಷ ಮತ್ತು ಕೇಂದ್ರ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರ ಬಹುತೇಕ ಹಿಂಬಾ ಲಿಕರು ಇದನ್ನೇ ಬಯಸಿದ್ದರು. ಬಯಸಿದ್ದು ಆಗಿದೆ. ಮುಂದಿನ ಲೋಕಸಭೆ ಚುನಾವಣೆಗೂ ರಾಹುಲ್ ನಾಯಕತ್ವ ಕೊಡುವರೇ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.