ಮುಂಬೈ (ಪಿಟಿಐ): ಸ್ಥಳೀಯ ಮತ್ತು ಜಾಗತಿಕ ವಿದ್ಯಮಾನಗಳಿಂದ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಬುಧವಾರ ಮತ್ತೆ 256 ಪೈಸೆಗಳಷ್ಟು ಕುಸಿದು (ದಿನವೊಂದರ ಗರಿಷ್ಠ ಕುಸಿತ) ರೂ. 68.85ರವರೆಗೂ ಜಾರಿತು. ನಂತರ ಅಲ್ಪ (5 ಪೈಸೆಯಷ್ಟು) ಚೇತರಿಕೆ ಕಂಡು ರೂ. 68.80ರಲ್ಲಿ ನಿಟ್ಟುಸಿರು ಬಿಟ್ಟಿತು.
ಆಹಾರ ಭದ್ರತೆ ಮಸೂದೆ ಕುರಿತಾದ ನಕಾರಾತ್ಮಕ ವಿಶ್ಲೇಷಣೆಗಳಿಂದ ಹೂಡಿಕೆದಾರರು ದಿಕ್ಕೆಟ್ಟಿದ್ದರೆ, ಇನ್ನೊಂದೆಡೆ ಮಾಸಾಂತ್ಯವಾದ್ದರಿಂದ ಆಮದುದಾರರು ಮತ್ತು ಬ್ಯಾಂಕುಗಳಿಂದ ಡಾಲರ್ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದೆ. ಅಮೆರಿಕವು ಸಿರಿಯಾ ವಿರುದ್ಧ ಯುದ್ಧ ನಡೆಸುವ ಸಾಧ್ಯತೆಗಳಿಂದ ಕಚ್ಚಾ ತೈಲ ಬೆಲೆ ಇನ್ನಷ್ಟು ಹೆಚ್ಚಲಿದೆ. ಈ ಎಲ್ಲ ವಿದ್ಯಮಾನಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿವೆ.
1381 ಪೈಸೆ ಮೌಲ್ಯ ನಷ್ಟ: ಕಳೆದ ಮೂರು ವಹಿವಾಟು ಅವಧಿಗಳಲ್ಲಿಯೇ ರೂ. 560 ಪೈಸೆಗಳಷ್ಟು (ಶೇ 8.86) ಕುಸಿತ ಕಂಡಿದೆ. ಆಗಸ್ಟ್‌ನಲ್ಲಿ ವಿನಿಮಯ ಮೌಲ್ಯ 840 ಪೈಸೆಗಳಷ್ಟು (ಶೇ 14) ಇಳಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ರೂಪಾಯಿ 1,381 ಪೈಸೆಗಳಷ್ಟು (ಶೇ 25) ಬೆಲೆ ಕಳೆದುಕೊಂಡಿದೆ.
ರೂಪಾಯಿ ಮೌಲ್ಯ ಡಾಲರ್ ವಿರುದ್ಧವಷ್ಟೇ ಅಲ್ಲ, ಯೂರೊ, ಪೌಂಡ್ ಮತ್ತಿತರ ಕರೆನ್ಸಿಗಳ ವಿರುದ್ಧವೂ ಅಪಮೌಲ್ಯಗೊಂಡಿದೆ. ಬುಧವಾರದ ವಹಿವಾಟಿನಲ್ಲಿ ಬ್ರಿಟಿಷ್ ಪೌಂಡ್ ವಿರುದ್ಧ 106ರ ಗಡಿ ದಾಟಿದೆ.
ಕಾರು ಬೆಲೆ ಏರಿಕೆ?: ರೂಪಾಯಿ ಪತನದಿಂದಾಗಿ ಕಾರುಗಳ ಬೆಲೆ ಏರಿಕೆಯಾಗುವ ಸೂಚನೆ ಹೊರಬಿದ್ದಿದೆ. ಜನರಲ್ ಮೋಟಾರ್ಸ್ ಕಂಪೆನಿ ಸೆಪ್ಟೆಂಬರ್ ಮೊದಲ ವಾರದಿಂದಲೇ ಕಾರುಗಳ ಬೆಲೆಯನ್ನು ರೂ. 10,000ದಷ್ಟು ಏರಿಸುವುದಾಗಿ ಪ್ರಕಟಿಸಿದೆ.
`ಬಂಗಾರ' ಮತ್ತಷ್ಟು ಭಾರ (ನವದೆಹಲಿ ವರದಿ): ರೂಪಾಯಿ ಮೌಲ್ಯ ನಷ್ಟ ಮುಂದುವರೆದಿರುವುದು ಚಿನಿವಾರ ಪೇಟೆ ಮೇಲೆ ಪರಿಣಾಮ ಬೀರಿದ್ದು, ಸ್ಟ್ಯಾಂಡರ್ಡ್ ಚಿನ್ನ 10 ಗ್ರಾಂಗೆ ದಿಢೀರ್ ರೂ. 2,500 ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮಟ್ಟವಾದ 34,500ಕ್ಕೆ ತಲುಪಿತು. ಒಂದೇ ದಿನದಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಇದೇ ಮೊದಲು. ಬೆಳ್ಳಿ ಧಾರಣೆಯೂ ರೂ. 3700ರಷ್ಟು ತುಟ್ಟಿಯಾಗಿ ಕೆ.ಜಿಗೆ ರೂ.58,500ರ ಮಟ್ಟಕ್ಕೇರಿತು.
ವಿಶ್ವದ ವಿಶ್ವಾಸ ನಷ್ಟ: ಟಾಟಾ
ಸದ್ಯದ ಹಣಕಾಸು ಮಾರುಕಟ್ಟೆ ಅಸ್ಥಿರತೆಯಿಂದಾಗಿ ದೇಶ ವಿಶ್ವದ ವಿಶ್ವಾಸವನ್ನೇ ಕಳೆದುಕೊಂಡಿರುವುದನ್ನು ಸರ್ಕಾರ ತಡವಾಗಿ ಗುರುತಿಸಿದೆ.
-ರತನ್ ಟಾಟಾ, ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ
ಇನ್ನಷ್ಟು ಆರ್ಥಿಕ ಸಮಸ್ಯೆ
ಭಾರತ ಸೇರಿದಂತೆ ಗರಿಷ್ಠ ಮಟ್ಟದ ವಿತ್ತೀಯ ಕೊರತೆ ಎದುರಿಸುತ್ತಿರುವ ದೇಶಗಳು, ಸದ್ಯದಲ್ಲೇ ಇನ್ನಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
- ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಸ್ಟ್ಯಾಂಡರ್ಡ್ ಅಂಡ್ ಪೂರ್ (ಎಸ್ ಅಂಡ್‌ಪಿ)
ಆಹಾರ ಭದ್ರತಾ ಮಸೂದೆ ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿದೆ.
- ಮದನ್ ಎಸ್. ಕೇರ್ ರೇಟಿಂಗ್ಸ್ ಸಂಸ್ಥೆಯ ಹಿರಿಯ ಅರ್ಥಶಾಸ್ತ್ರಜ್ಞ
ತರ್ಕಬಾಹಿರ ಅಂಶಗಳು ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿವೆ. ಮಾರುಕಟ್ಟೆ ತನ್ನಷ್ಟಕ್ಕೆ ತಾನೇ ಸರಿಯಾಗಲಿದೆ. ಹೂಡಿಕೆದಾರರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.
- ಅರವಿಂದ್ ಮಯರಾಂ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.