ಮೂಡುಬಿದಿರೆ: ವರ್ಧಮಾನ ಪ್ರಶಸ್ತಿ ಪೀಠವು 2014ರ ಸಾಲಿನಲ್ಲಿ ವರ್ಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಧಾರವಾಡದ ಡಾ.ಗಿರಡ್ಡಿ ಗೋವಿಂದರಾಜ ಅವರ ‘ಸಾಹಿತ್ಯಲೋಕದ ಸುತ್ತಮುತ್ತ’ (ಪ್ರಸಂಗಗಳು) ಮತ್ತು ವರ್ಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಗೆ ಉಡುಪಿ ಕುಂಜಿಬೆಟ್ಟು ಡಾ.ಕಾತ್ಯಾಯಿನಿ ಅವರ ‘ತೊಗಲುಗೊಂಬೆ’ ಕಾದಂಬರಿಯನ್ನು ಆಯ್ಕೆ ಮಾಡಲಾಗಿದೆ.
ಪೀಠದ ಅಧ್ಯಕ್ಷ ಸಿ.ಕೆ. ಪಡಿವಾಳ್ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ತೀರ್ಪುಗಾರ ಮಂಡಳಿಯ ಸದಸ್ಯರಾದ ಡಾ.ಕಮಲಾ ಹೆಮ್ಮಿಗೆ, ಡಾ. ಬಿ.ಜನಾರ್ದನ ಭಟ್, ಪ್ರೊ.ಧರಣೇಂದ್ರ ಕುರುಕುರಿ ನೀಡಿದ ಅಂಕಗಳ ಆಧಾರದಲ್ಲಿ ಆಯ್ಕೆ ನಡೆಸಲಾಗಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ. ನಾ. ಮೊಗಸಾಲೆ ತಿಳಿಸಿದ್ದಾರೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಯು ತಾಮ್ರ ಪತ್ರ, ಹದಿನೈದು ಸಾವಿರ ನಗದು ಹಾಗೂ ಸನ್ಮಾನ ಮತ್ತು ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ತಾಮ್ರ ಪತ್ರ, ಹತ್ತು ಸಾವಿರ ನಗದು ಮತ್ತು ಸನ್ಮಾನವನ್ನೊಳಗೊಂಡಿರುತ್ತದೆ. ದಸರಾ ಸಾಹಿತ್ಯೋತ್ಸವ ಸಂದರ್ಭದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.