ಮಂಡಿ: ಹಿಮಾಚಲಪ್ರದೇಶದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಹೊಟ್ಟೆ ನೋವೆಂದು ದಾಖಲಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರು ಆಶ್ಚರ್ಯಕ್ಕೀಡಾದ ವಿಲಕ್ಷಣ ಪ್ರಸಂಗವೊಂದು ಇತ್ತೀಚೆಗೆ ನಡೆದಿದೆ.
ತೀವ್ರ ಹೊಟ್ಟೆ ನೋವಿನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯನ್ನು ಪರೀಕ್ಷಿಸಿದಾಗ, ವ್ಯಕ್ತಿಯ ಹೊಟ್ಟೆಯಲ್ಲಿ ವಸ್ತುಗಳಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಎಕ್ಸ್ ರೇ ಮಾಡಿಸಿದಾಗ ಅಲ್ಲಿ ಚಮಚಗಳು ಕಂಡಿವೆ. ಇದರಿಂದ ಗಾಭರಿಗೊಂಡ ವೈದ್ಯರು ಕೂಡಲೇ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ, ಹೊಟ್ಟೆಯಲ್ಲಿ 8 ಚಮಚಗಳು, 2 ಸ್ಕ್ರ್ಯೂ ಡ್ರೈವರ್‌ಗಳು, 2 ಹಲ್ಲುಜ್ಜುವ ಬ್ರಷ್‌ಗಳು, ಒಂದು ಚಾಕು ಪತ್ತೆಯಾಗಿವೆ.
ಈ ಕುರಿತು ಮಾತನಾಡಿರುವ ಆಸ್ಪತ್ರೆಯ ವೈದ್ಯ ನಿಖಿಲ್, ‘ಹೊಟ್ಟೆ ನೋವೆಂದು ಬಂದಿದ್ದ ರೋಗಿಯ ಹೊಟ್ಟೆಯಲ್ಲಿ ವಸ್ತುಗಳಿರುವುದು ನಮಗೆ ಗೊತ್ತಾಗಿತ್ತು. ಹೀಗಾಗಿ ನಾವು ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದೆವು. ಸದ್ಯ ಅವರು ಆರೋಗ್ಯವಾಗಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇದರೊಂದು ವಿಲಕ್ಷಣ ಪ್ರಸಂಗ,’ ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.