ADVERTISEMENT

ಶಬರಿಮಲೆ: ‘ಸುಪ್ರೀಂ’ಗೆ ಮನವರಿಕೆಗೆ ನಿರ್ಧಾರ

ಪರಂಪರೆ ಮುರಿಯಲು ಸಾಧ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 12 ಜನವರಿ 2016, 19:30 IST
Last Updated 12 ಜನವರಿ 2016, 19:30 IST

ತಿರುವನಂತಪುರ (ಪಿಟಿಐ): ಸುಪ್ರೀಂಕೋರ್ಟ್‌ ಆಕ್ಷೇಪದ ಹೊರತಾಗಿಯೂ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ   ಮಹಿಳೆಯರಿಗೆ  ಪ್ರವೇಶ ನೀಡಲು ಸಾಧ್ಯವಾಗಲಿಕ್ಕಿಲ್ಲ ಎಂದು ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ.

ಶಬರಿಮಲೆಯಲ್ಲಿ ಶತಮಾನಗಳ ಪರಂಪರೆಯನ್ನು   ಮುರಿಯಲು ಸಾಧ್ಯವಾಗುವುದಿಲ್ಲ. ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧವನ್ನುಸಂಪ್ರದಾಯದಂತೆ ಮುಂದುವರಿಸಲಾಗುವುದು.    ದೇವಸ್ಥಾನದ ಆಡಳಿತ ಮಂಡಳಿ ನಿಲುವನ್ನು ಸುಪ್ರೀಂಕೋರ್ಟ್‌ ಮುಂದೆ ಸ್ಪಷ್ಟಪಡಿಲಾಗುವುದು ಎಂದು ಮಂಡಳಿಯ ಅಧ್ಯಕ್ಷ  ಪ್ರಯಾರ್ ಗೋಪಾಲಕೃಷ್ಣನ್ ತಿಳಿಸಿದರು.

ಯುವತಿಯರು ಮತ್ತು ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಇರುವ ನಿಷೇಧವನ್ನು ಪ್ರಶ್ನಿಸಿ ಯುವ ವಕೀಲರ ಸಂಘವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ, ಸಂಪ್ರದಾಯ ಮತ್ತು ಪರಂಪರೆಯ ಹೆಸರಿನಲ್ಲಿ ಈ ರೀತಿ ತಾರತಮ್ಯ ಮಾಡುವುದು ಸಂವಿಧಾನದ ಉಲ್ಲಂಘನೆಯಲ್ಲವೇ ಎಂದು ಸುಪ್ರೀಂಕೊರ್ಟ್ ಪ್ರಶ್ನಿಸಿದೆ.

ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ವಿಶೇಷ ಧಾರ್ಮಿಕ ಕಾರ್ಯಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದು ಗೋಪಾಲಕೃಷ್ಣನ್ ಹೇಳಿದರು.

ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಎಂಬ ನಂಬಿಕೆಯಿಂದ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಆದ್ದರಿಂದ ಈ ದೇವಸ್ಥಾನದ ಪ್ರವೇಶಕ್ಕೆ ಮಹಿಳೆಯರಿಗೆ ಮೊದಲಿನಿಂದಲೂ  ನಿಷೇಧವಿದೆ ಎಂದು ಹೇಳಿದರು.

ಸುರಕ್ಷತೆಯೂ ಕಾರಣ
ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸುವ ಹಿಂದೆ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರಣಗಳಷ್ಟೆ ಅಲ್ಲ, 3 ತಿಂಗಳುಗಳ ಅವಧಿಯಲ್ಲಿ ಲಕ್ಷಾಂತರ ಜನರು ಈ ಬೆಟ್ಟಕ್ಕೆ ಬರುವುದರಿಂದ ಮಹಿಳೆಯರ ಸುರಕ್ಷತೆ ಮುಖ್ಯವಾಗುತ್ತದೆ ಎಂದು ವಿಎಚ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಸ್‌ಜೆ ಆರ್ ಕುಮಾರ್ ಹೇಳಿದ್ದಾರೆ.

ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಮುಂದುವರಿಯಬೇಕು ಎಂದು ವಿಎಚ್‌ಪಿ ಸಹ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲಿದೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.