ನವದೆಹಲಿ: ವಿಜಯ್ ಗೊಯಲ್, ಪ್ರಕಾಶ್ ಜಾವಡೇಕರ್, ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಚಿವರು ಸರ್ಕಾರಿ ಬಂಗಲೆಯ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ.
ಅಜಿತ್ ಕುಮಾರ್ ಸಿಂಗ್ ಎಂಬುವರು ಆರ್‌ಟಿಐ ಅಡಿ ಕೇಳಿದ ಪ್ರಶ್ನೆಗೆ ಸಚಿವಾಲಯವು ಈ ಉತ್ತರ ನೀಡಿದೆ. ಮುಖ್ತಾರ್ ಅಬ್ಬಾಸ್ ನಕ್ವಿ ಮತ್ತು ಜಿತೇಂದ್ರ ಸಿಂಗ್ ಕೂಡ ಈ ಪಟ್ಟಿಯಲ್ಲಿದ್ದಾರೆ ಎಂದು ಅದು ಹೇಳಿದೆ.
ಕಳೆದ ಏಪ್ರಿಲ್ 26ರಂದು ಸಚಿವಾಲಯ ಈ ಪ್ರತಿಕ್ರಿಯೆ ನೀಡಿದ್ದು, ಕಳೆದ ಫೆಬ್ರುವರಿವರೆಗಿನ ಶುಲ್ಕವನ್ನು ಈ ಸಚಿವರುಗಳು ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದೆ.
ಈ ಸಚಿವಾಲಯದಡಿ ಬರುವ ಸರ್ಕಾರಿ ಆಸ್ತಿ ಕುರಿತ ನಿರ್ದೇಶನಾಲಯವು ಕೇಂದ್ರ ಸಚಿವರು ಮತ್ತು ಸಂಸದರಿಗೆ ನವದೆಹಲಿಯಲ್ಲಿ ಬಂಗಲೆಗಳನ್ನು ಹಂಚಿಕೆ ಮಾಡುತ್ತದೆ.
’ಬಂಗಲೆಯಲ್ಲಿ ಒದಗಿಸಲಾದ ಪೀಠೋಪಕರಣ ಮತ್ತಿತರ ವಸ್ತುಗಳಿಗೆ ಸಂಬಂಧಿಸಿದ ಶುಲ್ಕ ಇದಾಗಿರುತ್ತದೆ‘ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.ಯಾವುದೇ ಬಾಕಿ ಉಳಿಸಿಕೊಳ್ಳದ ಸಚಿವರು ಮತ್ತು ಸಂಸದರಿಗೆ ನಿರ್ದೇಶನಾಲಯವು ‘ಬಾಕಿ ರಹಿತ ಪ್ರಮಾಣಪತ್ರ’ವನ್ನು (ಎನ್‌ಡಿಸಿ) ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.