ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಬದಲು ಮೂರನೆಯ ಭಾಷೆಯಾಗಿ ಸಂಸ್ಕೃತ ಕಡ್ಡಾಯಗೊಳಿಸಬೇಕು ಎಂಬ ಕೇಂದ್ರದ ನಿರ್ಧಾರಕ್ಕೆ ಹಿನ್ನಡೆ ಆಗಿದೆ. ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು.
ಜರ್ಮನಿ–ಸಂಸ್ಕೃತ ವಿವಾದಲ್ಲಿ ವಿದ್ಯಾರ್ಥಿಗಳನ್ನು ಯಾಕೆ ಬಲಿಪಶು ಮಾಡುತ್ತೀರಿ? ನಿಮ್ಮ ಕೈಯಿಂದ ಆದ ತಪ್ಪಿಗೆ ಅವರು ಏಕೆ ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳುವಂತೆ ಸೂಚಿಸಿತು.
ಕೇಂದ್ರೀಯ ವಿದ್ಯಾಲಯಗಳಲ್ಲಿ ಮೂರನೆಯ ಭಾಷೆಯಾಗಿ ಜರ್ಮನ್ ಬೋಧಿಸಬೇಕು ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ಗೊಥೆ ಇನ್‌ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನ್ ನಡುವೆ ಒಪ್ಪಂದ ಆಗಿದೆ. ಆದರೆ, ಇದು ಅಕ್ರಮ ಎಂದು ಅಟಾರ್ನಿ ಜನರಲ್ ಮುಕುಲ್ ರಸ್ತೋಗಿ ಕೋರ್ಟ್‌ಗೆ ಹೇಳಿದರು.
ಆದರೆ, ಈ ವಾದವನ್ನು ಒಪ್ಪದ ಕೋರ್ಟ್, ನೀವು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷೆ. ಮುಖ್ಯ ಪರೀಕ್ಷೆಗೆ ಇನ್ನು ಕಲವೇ ತಿಂಗಳುಗಳು ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡುವುದು ಸರಿಯಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಥಾಸ್ಥಿತಿಯೇ ಮುಂದುವರಿಯಲಿ ಎಂದು ಸೂಚಿಸಿತು.
ಕೋರ್ಟ್ ತೀರ್ಪಿನಿಂದ ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ 70 ಸಾವಿರ ವಿದ್ಯಾರ್ಥಿಗಳು ಮತ್ತು ಜರ್ಮನ್ ಭಾಷೆ ಕಲಿಸುತ್ತಿದ್ದ 700 ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.