ADVERTISEMENT

ಸಂಸ್ಕೃತ ವಿವಾದ:ಸ್ಮೃತಿ ಇರಾನಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 10:03 IST
Last Updated 23 ನವೆಂಬರ್ 2014, 10:03 IST

ನವದೆಹಲಿ (ಪಿಟಿಐ): ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್‌ ಬದಲು ಮೂರನೆಯ ಭಾಷೆಯಾಗಿ ಸಂಸ್ಕೃತ ಕಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬ ತಮ್ಮ ಹೇಳಿಕೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವೆ ಸ್ಮೃತಿ ಇರಾನಿ ಭಾನುವಾರ ಇಲ್ಲಿ ಸಮರ್ಥನೆ ನೀಡಿದ್ದಾರೆ.

ಸಂಸ್ಕೃತ ಕಡ್ಡಾಯಗೊಳಿಸುವ ಮೂಲಕ ಕೇಂದ್ರ ಸರ್ಕಾರ ‘ಶಿಕ್ಷಣವನ್ನು ಕೇಸರೀಕರಣ’ಗೊಳಿಸುತ್ತಿದೆ ಎಂಬ ಟೀಕೆಯನ್ನು ತಳ್ಳಿಹಾಕಿದ ಅವರು, ಕೆಲವರು ನನ್ನನ್ನು ಆರ್‌ಎಸ್‌ಎಸ್‌ ಪ್ರತಿನಿಧಿಯಂತೆ  ಬಿಂಬಿಸುತ್ತಾ, ನಾನು ಮಾಡಿರುವ ಒಳ್ಳೆಯ ಕೆಲಸಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಜನರು ಯಾಕೆ ನಾನು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ  ವ್ಯಕ್ತಪಡಿಸಿದರು. 

2011ರಲ್ಲಿ ಮಾಡಿಕೊಂಡಿರುವ ಒಪ್ಪಂದದಂತೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಮೂರನೆಯ ಭಾಷೆಯಾಗಿ ಜರ್ಮನ್‌ ಕಲಿಸಲಾಗುತ್ತದೆ. ಆದರೆ ಈ ಒಪ್ಪಂದವು ಸಂವಿಧಾನದ ಉಲ್ಲಂಘನೆ ಆಗುತ್ತದೆ. ಸರ್ಕಾರ ಇದನ್ನು ಪರಿಶೀಲಿಸುತ್ತಿದೆ.
ಇನ್ನು ಮೂರನೆಯ ಭಾಷೆಯಾಗಿ ಸಂವಿಧಾನದಲ್ಲಿ ಪಟ್ಟಿ ಮಾಡಿರುವ 23 ಭಾರತೀಯ ಭಾಷೆಗಳಲ್ಲಿ ಯಾವುದನ್ನು ಬೇಕಾದರೂ ಅಳವಡಿಸಿಕೊಳ್ಳಬಹುದು ಎಂದು ಅವರು ಸ್ಪಷ್ಟನೆ ನೀಡಿದರು.

ಸಿಬಿಎಸ್‌ಇ ಪಠ್ಯಕ್ರಮದಿಂದ ಜರ್ಮನ್‌ ಭಾಷೆಯನ್ನು ತೆಗೆದು ಹಾಕುವುದಿಲ್ಲ. ಅದನ್ನು ವಿದೇಶಿ ಭಾಷೆಯಾಗಿ ಪರಿಗಣಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT