ADVERTISEMENT

ಸಮತೋಲನದ ಜೇಟ್ಲಿ ನಡಿಗೆ

ವಿಶ್ಲೇಷಣೆ

ಡಿ.ಮರಳೀಧರ
Published 29 ಫೆಬ್ರುವರಿ 2016, 19:51 IST
Last Updated 29 ಫೆಬ್ರುವರಿ 2016, 19:51 IST
ಸಮತೋಲನದ ಜೇಟ್ಲಿ ನಡಿಗೆ
ಸಮತೋಲನದ ಜೇಟ್ಲಿ ನಡಿಗೆ   

ನರೇಂದ್ರ ಮೋದಿ ಸರ್ಕಾರದ ಮೂರನೆಯ ಬಜೆಟ್‌ ಸಂಸತ್ತಿನಲ್ಲಿ ಮಂಡನೆಯಾಗಿದೆ. ಜಾಗತಿಕ ಮತ್ತು ಆಂತರಿಕ ಆರ್ಥಿಕ ಪರಿಸ್ಥಿತಿ, ರಾಜಕೀಯ ಸ್ಥಿತಿಗತಿಗಳು ಬಜೆಟ್‌ನ ಆದ್ಯತೆ ಏನಿರಬೇಕು ಎಂಬುದನ್ನು ತೀರ್ಮಾನಿಸುತ್ತವೆ. ಹಿಂದಿನ ಎರಡು ಬಜೆಟ್‌ಗಳು ಈ ವಾಸ್ತವದ ಚೌಕಟ್ಟಿನಲ್ಲಿ ಇರಲಿಲ್ಲ. ಆದರೆ, ಇಂದಿನ ಬಜೆಟ್‌ ಹಾಗಿಲ್ಲ.

ಸಾಮಾನ್ಯ ಸಂದರ್ಭಗಳಲ್ಲಿ ಆರ್ಥಿಕ ಸಮೀಕ್ಷೆಯು ದೇಶದ ಪರಿಸ್ಥಿತಿಯ ಚಿತ್ರಣ ನೀಡುತ್ತದೆ. ಕಾರಣ–ಪರಿಣಾಮಗಳ ಬಗ್ಗೆ, ಮುಂದಿರುವ ಆಯ್ಕೆಗಳ ಬಗ್ಗೆ ಅದು ಹೆಚ್ಚು ಇಣುಕುವುದಿಲ್ಲ. ಆದರೆ, ಅರವಿಂದ ಸುಬ್ರಮಣಿಯಂ ಅವರ ನಡೆ ಹೊಸತನದಿಂದ ಕೂಡಿತ್ತು, ಬೇರೆಯದೇ ನಡೆ ಅನುಸರಿಸಿತು. ಇದು ಉತ್ತೇಜನಕಾರಿಯೂ ಆಗಿತ್ತು.

ಸಬ್ಸಿಡಿ ಸಮಸ್ಯೆ, ಬ್ಯಾಂಕ್‌ಗಳು ಎದುರಿಸುತ್ತಿರುವ ವಸೂಲಾಗದ ಸಾಲದ ಸಮಸ್ಯೆ ಪರಿಹಾರಕ್ಕೆ, ಉದ್ಯೋಗಾವಕಾಶ ಹೆಚ್ಚಿಸಲು ಇರುವ ಮಾರ್ಗಗಳ ಬಗ್ಗೆ ಹಲವು ಆಯ್ಕೆಗಳನ್ನು ಸಮೀಕ್ಷೆಯಲ್ಲಿ ಹೇಳಲಾಗಿದೆ. ಆದರೆ, ಹಣಕಾಸು ಸಚಿವರು ಬೇರೆಯದೇ ಮಾರ್ಗ ತುಳಿದರು.

ಜಾಗತಿಕ ಆರ್ಥಿಕ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಅದು ಭಾರತ ಆರ್ಥಿಕತೆ ಮೇಲೆ ಬೀರಬಹುದಾದ ಪರಿಣಾಮವನ್ನು ಅರ್ಥ ಸಚಿವರು ತಮ್ಮ ಆರಂಭಿಕ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳಿದರು. ವಿಶ್ವದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಆಗುವ ಶೇಕಡ 1ರಷ್ಟು ಕುಸಿತದಿಂದ ದೇಶಿ ಜಿಡಿಪಿ ದರ ಶೇ 0.48ರಷ್ಟು ಕುಸಿಯುತ್ತದೆ. ವಿಶ್ವ ಅರ್ಥ ವ್ಯವಸ್ಥೆ ವೃದ್ಧಿ ದರ ಶೇ 2ರ ಆಸುಪಾಸಿನಲ್ಲಿ ಇದೆ. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.

ಆದರೆ, ದೇಶದ ಅರ್ಥ ವ್ಯವಸ್ಥೆ ಶೇ 7.5ರ ದರದಲ್ಲಿ ಸ್ಥಿರವಾಗಿ ಬೆಳೆಯುತ್ತಿರುವುದು ಉತ್ತೇಜನ ಮೂಡಿಸಿದೆ. ವಿಶ್ವದ ಅನೇಕ ಸಂಸ್ಥೆಗಳ ಮೆಚ್ಚುಗೆಗೆ ಪಾತ್ರವಾಗಿರುವ ದೇಶಿ ಆರ್ಥಿಕತೆ, ಕಗ್ಗತ್ತಲಲ್ಲಿ ಕಾಣುತ್ತಿರುವ ಏಕೈಕ ನಕ್ಷತ್ರ.

ದೇಶಿ ಅರ್ಥ ವ್ಯವಸ್ಥೆ ಎರಡಂಕಿ ದರದಲ್ಲಿ ಬೆಳವಣಿಗೆ ಸಾಧಿಸಬೇಕು ಎಂಬ ಉದ್ದೇಶ ವಾಸ್ತವ ರೂಪಕ್ಕೆ ಬರುತ್ತಿಲ್ಲ. ವಸೂಲಾಗದ ಸಾಲದ ಪ್ರಮಾಣ ಹೆಚ್ಚಿರುವುದು, ಖಾಸಗಿ ಹೂಡಿಕೆ ಕಡಿಮೆಯಾಗಿರುವುದು, ಸಬ್ಸಿಡಿ ಮೊತ್ತ ಉಬ್ಬುತ್ತಿರುವುದು ಹಾಗೂ ಏಳನೆಯ ವೇತನ ಆಯೋಗದ ಶಿಫಾರಸಿನ ಅನುಷ್ಠಾನದಿಂದ ಆಗುವ ದೊಡ್ಡ ಪ್ರಮಾಣದ ಖರ್ಚು ಹಣಕಾಸು ಸಚಿವರಿಗೆ ಸವಾಲಾಗಿ ಪರಿಣಮಿಸಿವೆ.

ಬೆಳವಣಿಗೆ ಮತ್ತು ವಿತ್ತೀಯ ಹೊಣೆಗಾರಿಕೆಗಳ ನಡುವೆ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಕಷ್ಟದ ಕೆಲಸ ಹಣಕಾಸು ಸಚಿವರ ಎದುರಿತ್ತು. ವಿತ್ತೀಯ ಕೊರತೆ ಪ್ರಮಾಣವನ್ನು ಶೇಕಡ 3.5ಕ್ಕೇ ನಿಯಂತ್ರಿಸಿ ಒಳ್ಳೆಯ ಹೆಸರು ಉಳಿಸಿಕೊಳ್ಳುವ ಮಾರ್ಗವನ್ನು ಅವರು ಅನುಸರಿಸಿದ್ದಾರೆ.

ಗ್ರಾಮೀಣ ಅರ್ಥ ವ್ಯವಸ್ಥೆ, ಸಾಮಾಜಿಕ ಅಂಶಗಳು, ಮೂಲಸೌಕರ್ಯ, ಆಡಳಿತ ಮತ್ತು ಹಣಕಾಸು ಸಂಸ್ಥೆಗಳನ್ನು ಆದ್ಯತೆಯಾಗಿ ಪರಿಗಣಿಸಿದ ಬಜೆಟ್‌ ಇದು ಎಂದು ಅವರು ಹೇಳಿದ್ದಾರೆ. ಅವರು ಬಜೆಟ್‌ಅನ್ನು ಒಂಬತ್ತು ಕಂಬಗಳ ಮೇಲೆ ನಿಂತಿರುವಂತೆ ರೂಪಿಸಿದ್ದಾರೆ. ಇದರ ಪರಿಣಾಮವಾಗಿ, ದೇಶದ ಬಹುಪಾಲು ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳು ಇದರಲ್ಲಿ ಅಡಕಗೊಂಡಿವೆ.

ಗ್ರಾಮೀಣ ಆದಾಯ ಖಾತರಿ, ರೈತರ ಅಭಿವೃದ್ಧಿ, ಗ್ರಾಮೀಣ ರಸ್ತೆಗಳು, ಆ ಭಾಗದಲ್ಲಿ ವಿದ್ಯುತ್‌ ಪೂರೈಕೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ಅನುದಾನ ನೀಡಲು ಈ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದೆ.

ರಾಜ್ಯಗಳ ಸಹಕಾರ ಪಡೆದು, ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಕೇಂದ್ರದ್ದು. ಕೃಷಿ ಕ್ಷೇತ್ರಕ್ಕೆ ನೀಡಿರುವ ₹ 36 ಸಾವಿರ ಕೋಟಿ, ನಬಾರ್ಡ್‌ ಮೂಲಕ ಕೈಗೊಳ್ಳುವ ನೀರಾವರಿ ಯೋಜನೆಗೆ ₹ 20 ಸಾವಿರ ಕೋಟಿ ಮೀಸಲಿಟ್ಟಿರುವುದನ್ನು ನೋಡಿದರೆ ಬಜೆಟ್‌ ಗ್ರಾಮ ಭಾರತದ ಕಡೆ ವಾಲಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಸಾಮಾಜಿಕ ವಿಚಾರಗಳಿಗೆ ಬಜೆಟ್‌ ನೀಡಿರುವ ಗಮನವನ್ನು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಘೋಷಿಸಿರುವ ಹಲವು ಯೋಜನೆಗಳು ಪರಿಪೂರ್ಣಗೊಳಿಸಿವೆ. ಕೌಶಲ ಅಭಿವೃದ್ಧಿ ಮತ್ತು ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಉತ್ತೇಜನ ನೀಡಲಾಗಿದೆ.

ಮೂಲಸೌಕರ್ಯಕ್ಕೆ, ಅದರಲ್ಲೂ ಮುಖ್ಯವಾಗಿ ರಸ್ತೆಗಳ ನಿರ್ಮಾಣಕ್ಕೆ, ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಲ್ಲ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆ, ರೈಲ್ವೆ ಇಲಾಖೆ ಮೂಲಕ ಮೀಸಲಿಟ್ಟಿರುವ ದೊಡ್ಡ ಮೊತ್ತದ ಹಣ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ₹ 2.18 ಲಕ್ಷ ಕೋಟಿ ನಿಗದಿಪಡಿಸಲಾಗಿದೆ.

ಇದು ಗ್ರಾಮೀಣ ಅರ್ಥ ವ್ಯವಸ್ಥೆಗೆ ಹೊಸ ಶಕ್ತಿ ನೀಡಬಹುದು. ಮೂಲಸೌಕರ್ಯಕ್ಕೆ ಸಂಬಂಧಿಸಿದ ಇತರ ಕ್ಷೇತ್ರಗಳು ಕೂಡ ಆದ್ಯತೆಯ ಮೇರೆಗೆ ಖರ್ಚು ಮಾಡುವ ಪಟ್ಟಿಯಲ್ಲಿವೆ. ಪ್ರಯಾಣಿಕರಿಗಾಗಿ ಇರುವ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ರಾಜ್ಯಗಳ ಅನುಮತಿ ಮತ್ತು ನಿಯಂತ್ರಣ ತೆರವಿಗೆ ಕ್ರಮ ಆರಂಭಿಸುವುದು ಈ ಬಜೆಟ್‌ನ ಪ್ರಮುಖ ಅಂಶ. ಇದು ದೊಡ್ಡ ಪ್ರಮಾಣದ ಬದಲಾವಣೆ ತರಬಲ್ಲದು. ಈ ನಿರ್ಧಾರ ಕೈಗೊಂಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಸಮರ್ಪಿಸಬೇಕು.

ಜಮೀನು ದಾಖಲೆ, ಶಿಕ್ಷಣ, ಗ್ರಾಮೀಣ ಮಾರುಕಟ್ಟೆ, ತೆರಿಗೆ ನಿರ್ವಹಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಇರಾದೆಯನ್ನು ಸರ್ಕಾರ ವ್ಯಕ್ತಪಡಿಸಿರುವುದು ಈ ಬಜೆಟ್‌ನ ಇನ್ನೊಂದು ಪ್ರಮುಖ ಅಂಶ. ‘ಆಧಾರ್’ ಯೋಜನೆಗೆ ಕಾನೂನಿನ ಮಾನ್ಯತೆ ನೀಡಿ, ಅದನ್ನು ಸಬ್ಸಿಡಿ ಮೊತ್ತವನ್ನು ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.

ನೇರ ಮತ್ತು ಪರೋಕ್ಷ ತೆರಿಗೆಯನ್ನು ಸುಧಾರಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ ₹ 19,160 ಕೋಟಿ ಸಿಗಲಿದೆ. ಆದಾಯ ತಾರಿಗೆ ವ್ಯಾಪ್ತಿಗೆ ಬರುವ, ಆದರೆ ದೊಡ್ಡ ಮೊತ್ತದ ಸಂಬಳ ಇಲ್ಲದವರಿಗೆ ಇದರಿಂದ ಪ್ರಯೋಜನ ಆಗಲಿದೆ. ಲಾಭಾಂಶಗಳ ಮೇಲೆ ತೆರಿಗೆ ವಿಧಿಸಿರುವ ಕಾರಣ ಹೆಚ್ಚು ಆದಾಯ ಹೊಂದಿರುವವರಿಗೆ ಹೊರೆ ಬೀಳಲಿದೆ. ಇದು ಪ್ರಗತಿಪರ ಕ್ರಮ ಅಲ್ಲ.

ಪಿ. ಚಿದಂಬರಂ ಮಂಡಿಸಿದ್ದ ‘ಕನಸಿನ ಬಜೆಟ್‌’ ಲಾಭಾಂಶದ ಮೇಲೆ ತೆರಿಗೆ ವಿಧಿಸುವುದನ್ನು ತೆಗೆದುಹಾಕಿತ್ತು. ಈಗ ಕೈಗೊಂಡಿರುವ ಕ್ರಮವನ್ನು ಹಣಕಾಸು ಸಚಿವರು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು. ಇದು ನ್ಯಾಯಸಮ್ಮತ ನಡೆ ಅಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಹಣಕಾಸು ಸಚಿವರು ಸಮತೋಲನದ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.