ADVERTISEMENT

ಸರಿದ ಆತಂಕದ ಕಾರ್ಮೋಡ

ಟಿ.ವಿ.ಮೋಹನದಾಸ್ ಪೈ
Published 25 ಮೇ 2015, 19:36 IST
Last Updated 25 ಮೇ 2015, 19:36 IST

ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಜನ ಭಾರಿ ನಿರೀಕ್ಷೆಗಳೊಂದಿಗೆ ಮತ ನೀಡಿದರು. ಮೂರು ವರ್ಷಗಳ ಕಾಲ ಕಂಡ ಹಗರಣಗಳು, ಕುಸಿದ ಅಭಿವೃದ್ಧಿ ದರ, ದುರ್ಬಲ ನಾಯಕತ್ವ, ಕಡಿಮೆಯಾಗುತ್ತಿದ್ದ ಹೂಡಿಕೆ ಮತ್ತು ಉದ್ಯೋಗ ಅವಕಾಶಗಳ ಕಾರಣ ಜನ ಬದಲಾವಣೆ ಬಯಸಿದ್ದರು. ಈ ಬದಲಾವಣೆಯ ಬಯಕೆಗೆ ಮೋದಿಯವರ ಅಭಿವೃದ್ಧಿ ಮತ್ತು ಬೆಳವಣಿಗೆಯ ಸೂತ್ರದಲ್ಲಿ ಉತ್ತರ ಕಾಣಿಸಿತು.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಸಾಧನೆ ಆಗಿದೆ. ಹಲವು ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಪರಿಸರ ಇಲಾಖೆಯ ಅನುಮೋದನೆ ವಿಳಂಬವಿಲ್ಲದೆ, ಭ್ರಷ್ಟಾಚಾರಕ್ಕೆ  ಅವಕಾಶ ಇಲ್ಲದೇ ದೊರೆಯುತ್ತಿದೆ. ರಕ್ಷಣೆ ಮತ್ತು ವಿಮೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿಸಲಾಗಿದೆ. ಇಂಧನ, ಕಲ್ಲಿದ್ದಲು ಮತ್ತು ರಸ್ತೆ ನಿರ್ಮಾಣ ಕ್ಷೇತ್ರದಲ್ಲಿದ್ದ ಅಡೆತಡೆಗಳು ನಿವಾರಣೆಯಾಗಿವೆ. ಪಾರದರ್ಶಕ ವ್ಯವಸ್ಥೆ ಕುರಿತ ಬದ್ಧತೆಯನ್ನು ಸರ್ಕಾರ ಕಲ್ಲಿದ್ದಲು ಗಣಿ ಹರಾಜು, ತರಂಗಾಂತರ ಹರಾಜು ಮತ್ತು ಕಬ್ಬಿಣದ ಅದಿರು ಗಣಿಗಾರಿಕೆ ಪರವಾನಗಿ ನೀಡುವಲ್ಲಿ ಪ್ರದರ್ಶಿಸಿದೆ.

ರಸ್ತೆ ನಿರ್ಮಾಣಕ್ಕೆ ನಿಗದಿ ಮಾಡುವ ಹಣದಲ್ಲಿ ಮೂರು ಪಟ್ಟು ಹೆಚ್ಚಳ ಮಾಡಿದ್ದು, ರೈಲು ಯೋಜನೆಗಳಿಗೆ ಶೇಕಡ 50ರಷ್ಟು ಹೆಚ್ಚಳ ಮಾಡಿರುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ದೆಹಲಿಯ ರಾಜಕೀಯ ವಲಯದಲ್ಲಾಗಲಿ, ಅಧಿಕಾರಿ ವಲಯದಲ್ಲಾಗಲಿ ಭ್ರಷ್ಟಾಚಾರದ ವಾಸನೆ ಬಾರದಿರುವುದು ನಿಜಕ್ಕೂ ಉತ್ತಮ ಸಾಧನೆ. ರಾಜಕಾರಣಿ–ಅಧಿಕಾರಿ–ಕಾರ್ಪೊರೇಟ್‌ ಒಳಸಂಬಂಧಗಳನ್ನು ತನ್ನ ಹತ್ತಿರ ಬರಲು ಸರ್ಕಾರ ಅವಕಾಶ ನೀಡಿಲ್ಲ. ಇದರಲ್ಲಿ ಭಾಗಿಯಾಗಿದ್ದವರು ಈಗ ಅವರಿವರ ಬಗ್ಗೆ ದೂರುತ್ತಿದ್ದಾರೆ.

ನಮ್ಮ ಈಗಿನ ಪ್ರಧಾನಿ ವಿದೇಶಗಳಿಗೆ ಸಾಕಷ್ಟು ಬಾರಿ ಪ್ರವಾಸ ಕೈಗೊಂಡು, ಆ ದೇಶಗಳ ಜತೆಗಿನ ಸಂಬಂಧ ವೃದ್ಧಿಯಾಗುವಂತೆ, ಭಾರತದ ಬಗ್ಗೆ ಜಗತ್ತಿಗೆ ಇರುವ ವಿಶ್ವಾಸ ಹೆಚ್ಚುವಂತೆ ಮಾಡಿದ್ದಾರೆ. ಭಾರತಕ್ಕೆ ಒಬ್ಬ ಬಲಾಢ್ಯ ನಾಯಕ ಇದ್ದಾನೆ, ಆ ನಾಯಕ ವ್ಯಾಪಾರ–ವಾಣಿಜ್ಯ–ಉದ್ಯಮಗಳಲ್ಲಿ ನಂಬಿಕೆ ಹೊಂದಿದ್ದಾನೆ ಎಂದು ಜಗತ್ತು ಈಗ ಒಪ್ಪಿದೆ. ಭಾರತದಲ್ಲಿ ಬಂಡವಾಳ ಹೂಡಲು ಒಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತ ತನ್ನ ಪ್ರತಿಷ್ಠೆಯನ್ನು ಮರಳಿ ಪಡೆದಿದೆ.

ಹಣದುಬ್ಬರ ದರ ಕಡಿಮೆಯಾಗಿದೆ. ತೈಲೋತ್ಪನ್ನಗಳ ಬೆಲೆ ಕಡಿಮೆಯಾಗಿರುವ ಕಾರಣ ಚಾಲ್ತಿ ಖಾತೆ ಕೊರತೆ ಕೂಡ ಕಡಿಮೆ ಆಗಿದೆ. ಪ್ರತಿಪಕ್ಷಗಳು ನಾಟಕೀಯವಾಗಿ ನಡೆದುಕೊಳ್ಳುತ್ತಿದ್ದರೂ ಸಂಸತ್ತು ಉತ್ತಮವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಕೋಮು ಸಂಘರ್ಷಗಳು ಉಂಟಾಗುತ್ತವೆ ಎಂಬ ಭೀತಿ ಸೃಷ್ಟಿಸಲು ಎಡಪಂಥೀಯ ಶಕ್ತಿಗಳು ಪ್ರಯತ್ನಿಸಿದರೂ, ಸಫಲವಾಗಲಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದುವರಿದಿವೆಯಾದರೂ, ದೇಶದ ಶಾಂತಿಗೆ ಭಂಗ ಆಗಿಲ್ಲ.

ಆದರೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಒಂದು ವರ್ಷದಲ್ಲಿ ಪ್ರಗತಿ ಕಾಣದಿರುವುದು ನಿರಾಸೆ ಮೂಡಿಸಿದೆ. ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚುತ್ತಿಲ್ಲ. ಬ್ಯಾಂಕ್‌ಗಳಿಗೆ ಮರುಪಾವತಿ ಆಗದ ಸಾಲದ ಪ್ರಮಾಣ ಶೇಕಡ 12ರಷ್ಟಾಗಿದೆ.

ಈ ಸಮಸ್ಯೆ ಯಾವಾಗ ಕೊನೆಯಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಹಣಕಾಸು ಸಚಿವರ ಭರವಸೆಯ ನಡುವೆಯೂ ‘ತೆರಿಗೆ ಭಯೋತ್ಪಾದನೆ’ ದೇಶದಲ್ಲಿ ನಿಂತಿಲ್ಲ. ಒಟ್ಟು ₨ 6.50 ಲಕ್ಷ ಕೋಟಿ ಮೊತ್ತದ ತೆರಿಗೆ ವ್ಯಾಜ್ಯ ನ್ಯಾಯಾಲಯಗಳಲ್ಲಿವೆ. ಈ ಸಮಸ್ಯೆಗಳನ್ನು ಪರಿಹರಿಸದಿರುವುದು ಸರ್ಕಾರದ ದೊಡ್ಡ ವೈಫಲ್ಯ. ಸರ್ಕಾರ ಹಾಗೂ ಉದ್ದಿಮೆಗಳ ನಡುವೆ ಸಂವಹನದ ಕೊರತೆಯೂ ಇದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಒಂದು ವರ್ಷದ ಅವಧಿಯಲ್ಲಿ ಮೋದಿ ಸರ್ಕಾರ ಒಳ್ಳೆಯ ಸಾಧನೆ ತೋರಿದೆ. ಅದರಲ್ಲೂ, ಯುಪಿಎ ಸರ್ಕಾರದ ಕೊನೆಯ ಮೂರು ವರ್ಷಗಳ ಅನಾಹುತಕಾರಿ ಸಾಧನೆ ನೋಡಿದಾಗ, ಈಗಿನ ಸರ್ಕಾರದ್ದು ಒಳ್ಳೆಯ ಸಾಧನೆ ಎಂದೇ ಹೇಳಬಹುದು.

ಈ ಆರ್ಥಿಕ ವರ್ಷ ಮತ್ತಷ್ಟು ಉತ್ತಮವಾಗುವ ಸೂಚನೆಯಿದೆ.  ಬಡ್ಡಿ ದರಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿವೆ. ಹಣದುಬ್ಬರ ದರ ಕಡಿಮೆಯಾಗಿದೆ. ಬಂಡವಾಳ ಹೂಡಿಕೆ ಹೆಚ್ಚುವ ಸೂಚನೆಗಳು ಕಾಣುತ್ತಿವೆ.

ಉದ್ಯೋಗ ಸೃಷ್ಟಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಇದನ್ನು ಪರಿಹರಿಸಲು, ಬಂಡವಾಳ ಹೂಡಿಕೆ ಹೆಚ್ಚಬೇಕು. ಹಣದುಬ್ಬರ ಹಿಡಿತದಲ್ಲಿರಬೇಕು. ಬ್ಯಾಂಕ್‌ಗಳು ಸಾಲ ಕೊಡುವ ಸ್ಥಿತಿಯಲ್ಲಿರಬೇಕು.

ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿ, ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಸಂಸತ್ತಿನ ಒಪ್ಪಿಗೆ ಪಡೆಯುವುದು ಮತ್ತು ಇತರ ಕೆಲವು ಕಾಯ್ದೆ–ಕಾನೂನುಗಳ ಜಾರಿ ಈ ಎಲ್ಲ ಪರಿಹಾರ ಕ್ರಮಗಳಿಗೆ ಬೆನ್ನೆಲುಬಾಗಿ ಇರಲಿವೆ.

ಒಟ್ಟಾರೆಯಾಗಿ, ಮೋದಿ ಸರ್ಕಾರವು ಬೆಳವಣಿಗೆ ಮತ್ತು ಅಭಿವೃದ್ಧಿ ದರವನ್ನು ಹಳಿಗೆ ತರುತ್ತದೆ ಎಂಬ ನಂಬಿಕೆ ಹುಸಿಯಾಗಿಲ್ಲ. ಆತಂಕದ ಕಾರ್ಮೋಡ ದೂರ ಸರಿದಿದೆ. ಕ್ರಿಯಾಶೀಲ ಪ್ರಧಾನಿ ಆರ್ಥಿಕ ವ್ಯವಸ್ಥೆ ಬೆಳವಣಿಗೆ ಕಾಣುವಂತೆ ಮಾಡುತ್ತಾರೆ, ಉದ್ಯೋಗ ಸೃಷ್ಟಿಯ ಪ್ರಮಾಣ ಹೆಚ್ಚಿಸುತ್ತಾರೆ ಎಂಬ ನಂಬಿಕೆ ಹೆಚ್ಚಾಗಿದೆ.

(ಲೇಖಕ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT