ADVERTISEMENT

ಸಾಹಿತ್ಯ ಅಕಾಡೆಮಿ ಮರುಶೋಧಿಸಿಕೊಳ್ಳಬೇಕು

ಹೆಚ್ಚುತ್ತಿರುವ ಅಸಹಿಷ್ಣುತೆ; ಪ್ರಶಸ್ತಿಗಳನ್ನು ವಾಪಸ್‌ ಮಾಡಿರುವ ಬರಹಗಾರರ ಬೇಡಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2015, 19:23 IST
Last Updated 1 ನವೆಂಬರ್ 2015, 19:23 IST

ನವದೆಹಲಿ (ಪಿಟಿಐ): ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಪ್ರತಿಭಟಿಸಿ ತಮ್ಮ ಪ್ರಶಸ್ತಿಗಳನ್ನು ವಾಪಸ್‌ ಮಾಡಿರುವ ಬರಹಗಾರರು, ಸಾಹಿತ್ಯ ಅಕಾಡೆಮಿಯು ತನ್ನನ್ನು ಮರುಶೋಧಿಸಿಕೊಳ್ಳಬೇಕು ಎಂದು ಪತ್ರ ಬರೆದಿದ್ದಾರೆ.

ಇತ್ತೀಚೆಗೆ  ತುರ್ತು ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆಯೇ ಅಕಾಡೆಮಿಯು ಇಂತಹ ಸಂದರ್ಭಗಳಿಗೆ ತೀಕ್ಷ್ಣವಾಗಿ ಹಾಗೂ ಮಾನವೀಯವಾಗಿ ಪ್ರತಿಸ್ಪಂದಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ‘ಹೆಚ್ಚುತ್ತಿರುವ ದ್ವೇಷ ಹಾಗೂ ಅಸಹಿಷ್ಣುತೆಯ ಇಂತಹ ಸನ್ನಿವೇಶದಲ್ಲಿ ಅಕಾಡೆಮಿಯು ತುರ್ತಾಗಿ ತನ್ನನ್ನು ಮರುಶೋಧಿಸಿಕೊಳ್ಳಬೇಕಾಗಿದೆ’  ಎಂದು 41 ಬರಹಗಾರರ ತಂಡವು ಅಕಾಡೆಮಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಹೇಳಿದೆ.

ಕುಂ.ವೀರಭದ್ರಪ್ಪ, ಶಶಿ ದೇಶಪಾಂಡೆ, ನಯನತಾರಾ ಸೆಹೆಗಲ್‌, ಅಶೋಕ್‌ ವಾಜಪೇಯಿ, ಗಣೇಶ್‌ ದೇವಿ, ಗೀತಾ ಹರಿಹರನ್‌, ಗುರುಬಚನ್‌ ಸಿಂಗ್‌ ಬುಲ್ಲರ್‌, ಕೆ.ಸಚ್ಚಿದಾನಂದನ್‌, ಕೇಕಿ ದಾರುವಾಲಾ, ಕೃಷ್ಣ ಸೋಬ್ತಿ, ಸಾರಾ ಜೋಸೆಫ್‌, ವಾರ್ಯಂ ಸಂಧು ಮತ್ತಿತರರು ಪತ್ರ ಬರೆದಿದ್ದಾರೆ.

ವಿಚಾರವಾದಿಗಳ ಹತ್ಯೆ, ದಾದ್ರಿ ಘಟನೆ ಹಾಗೂ ಚಿಂತಕ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಮಸಿ ಸುರಿದ ಘಟನೆಗೆ    ಅಕಾಡೆಮಿ ಮೌನ ತಾಳಿದೆ ಎಂದು ಆರೋಪಿಸಿ ನಯನತಾರಾ ಸೆಹಗಲ್‌, ಅಶೋಕ್‌ ವಾಜಪೇಯಿ ಸೇರಿದಂತೆ ಕನಿಷ್ಠ 36 ಬರಹಗಾರರು ಒಬ್ಬರಾದ ಮೇಲೆ ಒಬ್ಬರಂತೆ  ರಾಜ್ಯ ಪ್ರಶಸ್ತಿಗಳನ್ನು ವಾಪಸ್‌ ಮಾಡಿದ್ದಾರೆ.

ಅಲ್ಲದೇ ಐವರು ಬರಹಗಾರರು ಅಕಾಡೆಮಿಯ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲಿಯೇ ಅಕಾಡೆಮಿಯು ಅಕ್ಟೋಬರ್‌ 23ರಂದು  ತುರ್ತು ಸಭೆ ಕರೆದಿತ್ತು. ವಿಚಾರವಾದಿ ಎಂ.ಎಂ.ಕಲಬುರ್ಗಿ ಹಾಗೂ ಇತರರ ಹತ್ಯೆಯನ್ನು ಬಲವಾಗಿ ಖಂಡಿಸಿತ್ತು. 

‘ರಾಜಕೀಯ ಲಾಭ ಇಲ್ಲ’–ಮಮತಾ,
ಕೋಲ್ಕತ್ತ ವರದಿ (ಪಿಟಿಐ): 
ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣವನ್ನು  ಖಂಡಿಸಿರುವ  ಪಶ್ಚಿಮಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ, ‘ ಅಸ್ಥಿರತೆ ಮೂಡಿಸುವುದರಿಂದ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ. ಇಂತಹ ಶಕ್ತಿಗಳಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ’ ಎಂದು ಹೇಳಿದ್ದಾರೆ.

‘ಏನು ತಿನ್ನಬೇಕು ಅಥವಾ ಧರಿಸಬೇಕು, ಹಾಡಬೇಕು...ಈ ಎಲ್ಲವೂ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು. ತನ್ನ ಇಚ್ಛೆಯ ವಿಷಯವನ್ನು ಬಹಿರಂಗವಾಗಿ ಘೋಷಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಈ ದೇಶದಲ್ಲಿ ಹಕ್ಕು ಇದೆ’ ಎಂದು ಮಮತಾ ತಿಳಿಸಿದ್ದಾರೆ.

*
ಪ್ರಶಸ್ತಿ ವಾಪಸ್‌ ದೇಶಕ್ಕೆ ಅವಮಾನ-ಜಲೋಟಾ
ಜೋಧಪುರ (ಪಿಟಿಐ):
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರೋಧಿಸಿ ನಡೆಸುತ್ತಿರುವ ಪ್ರಶಸ್ತಿ ವಾಪಸ್‌ ಪ್ರತಿಭಟನೆಯನ್ನು ‘ದೇಶಕ್ಕೆ ಎಸಗುತ್ತಿರುವ ಅವಮಾನ’ ಎಂದು ಹಿರಿಯ ಭಕ್ತಿಗೀತೆ ಗಾಯಕ ಅನೂಪ್‌ ಜಲೋಟಾ ಭಾನುವಾರ ಹೇಳಿದ್ದಾರೆ. ರಾಜಸ್ತಾನ ಸಂಗೀತ ಮತ್ತು ನಾಟಕ ಅಕಾಡೆಮಿಯ ಆಹ್ವಾನದ ಮೇರೆಗೆ ಕಾರ್ಯಕ್ರಮ ನೀಡಲು ಇಲ್ಲಿಗೆ ಬಂದಿದ್ದ ಅವರು, ಪ್ರತಿಭಟನೆ ವ್ಯಕ್ತಪಡಿಸಲು ಇನ್ನೂ ಉತ್ತಮ ಮಾರ್ಗಗಳಿವೆ ಎಂದು ಅಭಿಪ್ರಾಯಪಟ್ಟರು.

‘ಅವರಿಗೆ ನೀಡಿರುವುದು ರಾಷ್ಟ್ರೀಯ ಪ್ರಶಸ್ತಿಗಳನ್ನು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅದನ್ನು ಹಿಂದಿರುಗಿಸುವುದು ಆ ಪ್ರಶಸ್ತಿಗೆ ಮಾತ್ರವಲ್ಲ, ದೇಶಕ್ಕೇ ಮಾಡುವ ಅವಮಾನ. ಪರಿಸ್ಥಿತಿಯನ್ನು ತಹಬದಿಗೆ ತರುವಂತೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಸಮುದಾಯವು ಒಟ್ಟಿಗೆ ಸೇರಿ ರಾಷ್ಟ್ರಪತಿಯನ್ನು ಭೇಟಿ ಮಾಡಿ ಚರ್ಚಿಸಲಿ’ ಎಂದು ಜಲೋಟಾ ಸಲಹೆ ನೀಡಿದರು. ‘ಜನರು ಒಟ್ಟಿಗೆ ಸೇರಿಕೊಂಡು ಸಮಸ್ಯೆ ಪರಿಹಾರದ ಕುರಿತು ಕೆಲಸ ಮಾಡಿದರೆ ಅದು ಉತ್ತಮ ಹಾಗೂ ಪರಿಣಾಮಕಾರಿ ನಡೆಯಾಗುತ್ತದೆ’ ಎಂದರು.

ಎಫ್‌ಟಿಐಐ ಅಧ್ಯಕ್ಷರನ್ನಾಗಿ ಗಜೇಂದ್ರ ಚೌಹಾಣ್‌ ಅವರನ್ನು ನೇಮಿಸಿರುವುದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳು ಅವರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು. ಅವರು ಅರ್ಹರೇ ಅಥವಾ ಅಲ್ಲವೇ ಎಂಬುದನ್ನು ಆನಂತರ ನಿರ್ಧರಿಸಬೇಕು ಎಂದು ಸಲಹೆ ನೀಡಿದರು.

‘ಚೌಹಾಣ್ ಅವರಿಗೆ ಕೆಲಸ ಮಾಡಲು ಬಿಡದೆ, ಎಫ್‌ಟಿಐಐಗೆ ಅಧ್ಯಕ್ಷ ಹುದ್ದೆಗೆ ಅವರು ಸೂಕ್ತ ಆಯ್ಕೆ ಅಲ್ಲವೆಂದು ಹೇಗೆ ನಿರ್ಧರಿಸುವಿರಿ? ಅವರಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಿ. ಅವರ ಕಾರ್ಯ ತೃಪ್ತಿಕರವಾಗಿಲ್ಲ ಎನಿಸಿದರೆ ಮಾತ್ರ ವಿದ್ಯಾರ್ಥಿಗಳು ಪ್ರತಿಭಟನೆ   ನಡೆಸುವ ಹಕ್ಕು ಹೊಂದುತ್ತಾರೆ’ ಎಂದರು.

*
ಮೋದಿ ಲಗಾಮು ತೊಡಿಸಲಿ
ಲಖನೌ/ ಮುಂಬೈ (ಪಿಟಿಐ):
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಕಳವಳ ವ್ಯಕ್ತಪಡಿಸಿರುವ ಸರೋದ್‌ ಮಾಂತ್ರಿಕ ಉಸ್ತಾದ್ ಅಮ್ಜದ್‌ ಅಲಿ ಖಾನ್‌, ‘ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಇತರ ಸದಸ್ಯರ ಮೇಲೆ ಲಗಾಮು ತೊಡಿಸಬೇಕು’ ಎಂದಿದ್ದಾರೆ.

‘ಪ್ರಶಸ್ತಿಗಳನ್ನು ವಾಪಸ್‌ ಮಾಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಶಸ್ತಿ ಹಿಂದಿರುಗಿಸುವವರು ಹುಚ್ಚರಲ್ಲ. ದೇಶದಲ್ಲಿ ಈಗ ನಡೆಯುತ್ತಿರುವ ಘಟನೆಗಳಿಂದ ನೊಂದು ಅವರು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ’  ಎಂದು ಭಾನುವಾರ ಲಖನೌನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಿಮಗೆ ದೊರೆತ ಪ್ರಶಸ್ತಿ ಹಿಂದಿರುಗಿಸುತ್ತೀರಾ ಎಂಬ ಪ್ರಶ್ನೆಗೆ, ‘ನಾನು ಈಗ ಪರಿಸ್ಥಿತಿಯನ್ನು ಅವಲೋಕಿಸುತ್ತಾ ಇದ್ದೇನೆ’ ಎಂದು ಉತ್ತರಿಸಿದರು. ‘ಅಸಹಿಷ್ಣುತೆ ಹೆಚ್ಚುತ್ತಿರುವುದು ನೋವಿನ ವಿಚಾರ. ನಿನ್ನೆ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಸಂದರ್ಶನವನ್ನು ವೀಕ್ಷಿಸಿದ್ದೆ. ಅವರು ಕೂಡಾ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತಿಲ್ಲ.

ಮೋದಿ ಅವರು ಸಾಕಷ್ಟು ಕೆಲಸಗಳನ್ನು ಮಾಡಲು ಬಯಸುತ್ತಿದ್ದಾರೆ. ಆದರೆ ಅವರ ಸುತ್ತ ಇರುವವರು ಅದಕ್ಕೆ ಅವಕಾಶ ನೀಡುತ್ತಿಲ್ಲ. ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ. ‘ಇಂತಹ ವ್ಯಕ್ತಿಗಳ ಮೇಲೆ ಲಗಾಮು ತೊಡಿಸುವ ಕೆಲಸವನ್ನು ಮೋದಿ ಮಾಡಬೇಕು. ಜನರು ಪ್ರಧಾನಿಯ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.