ADVERTISEMENT

ಸಿಕ್ಕಾ ವರ್ಷದ ಪಗಾರ ರೂ 30 ಕೋಟಿ!

​ಪ್ರಜಾವಾಣಿ ವಾರ್ತೆ
Published 2 ಜುಲೈ 2014, 19:30 IST
Last Updated 2 ಜುಲೈ 2014, 19:30 IST

ನವದೆಹಲಿ(ಪಿಟಿಐ): ‘ಇನ್ಫೊಸಿಸ್‌’ನ ನೂತನ ಮುಖ್ಯ ಕಾರ್ಯ­­ನಿರ್ವಹಣಾ­ಧಿ­ಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಅವರ ವಾರ್ಷಿಕ ವೇತನ 50.80 ಲಕ್ಷ  ಡಾಲರ್‌ (ಸುಮಾರು ₨30.33 ಕೋಟಿ)ಗಳಷ್ಟಿದೆ !

ಜತೆಗೆ, 20 ಲಕ್ಷ ಡಾಲರ್‌ (₨11.95 ಕೋಟಿ) ಮೌಲ್ಯದ ಷೇರುಗ­ಳನ್ನೂ ಸಿಕ್ಕಾ ಪಡೆದುಕೊಳ್ಳಲಿದ್ದಾರೆ. ಸಂಬಳ ಮತ್ತಿ­ತರ ಸೌಲಭ್ಯಗಳ ಒಟ್ಟು ಮೊತ್ತ ಭಾರಿಯಾಗಿದ್ದರೂ ಇದು ಜಾಗತಿಕ ಮಟ್ಟದ ‘ಸಿಇಒ’ಗಳ ವೇತನ­ಕ್ಕಿಂತ ಕಡಿಮೆ ಪ್ರಮಾಣದ್ದೇ ಆಗಿದೆ.

ಸದ್ಯ ‘ಸಿಇಒ’ ಆಗಿರುವ ಎಸ್.ಡಿ.­ಶಿಬುಲಾಲ್‌ ಅವರಿಂದ ವಿಶಾಲ್‌ ಸಿಕ್ಕಾ (47) ಆಗಸ್ಟ್‌ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಕಂಪೆನಿ ‘ಇನ್ಫೊಸಿಸ್‌’, ಜುಲೈ 30ರಂದು ವಿಶೇಷ ಮಹಾಸಭೆಗೆ (ಇಜಿಎಂ) ಷೇರುದಾರರಿಗೆ ಸುತ್ತೋಲೆ ಕಳಿಸಿದೆ. ‘ಸಿಇಒ’ ಹುದ್ದೆಗೆ ವಿಶಾಲ್‌ ಸಿಕ್ಕಾ ಅವರ ನೇಮಕಕ್ಕೆ ಷೇರುದಾರರ ಅನುಮೋದನೆ ಪಡೆಯುವುದೇ ಈ ‘ಇಜಿಎಂ’ ಉದ್ದೇಶವಾಗಿದೆ.

ವಿಶಾಲ್‌ ಸಿಕ್ಕಾ ಅವರು ವಾರ್ಷಿಕ 9 ಲಕ್ಷ  ಡಾಲರ್‌ (ಸುಮಾರು ₨5.38 ಕೋಟಿ) ಮೂಲ ವೇತನ ಹಾಗೂ 41.80 ಲಕ್ಷ ಡಾಲರ್‌ (₨ 25 ಕೋಟಿ) ಪ್ರೋತ್ಸಾಹ ಧನ ಪಡೆಯುವರು. ಜತೆಗೆ ಇನ್ಫೊಸಿಸ್‌ನ 20 ಲಕ್ಷ ಡಾಲರ್‌ ಮೌಲ್ಯದ  ಷೇರುಗಳನ್ನೂ ಪಡೆದು­ಕೊಳ್ಳು­ವರು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಅಂದರೆ, ಸಿಕ್ಕಾ ಅವರಿಗೆ ಮೊದಲ ವರ್ಷದಲ್ಲೇ ಒಟ್ಟು 70.8 ಲಕ್ಷ ಡಾಲರ್‌ಗಳಷ್ಟು (₨42.27 ಕೋಟಿ) ಗಳಿಕೆ ಆಗಲಿದೆ.

ಅರ್ಧಕ್ಕಿಂತಲೂ ಕಡಿಮೆ!: ಆದರೆ, ಮೈಕ್ರೊಸಾಫ್ಟ್‌ನ ‘ಸಿಇಒ’ ಪಡೆಯುತ್ತಿ­ರುವ 1.80 ಕೋಟಿ ಡಾಲರ್‌ (₨107.50 ಕೋಟಿ), ‘ಐಬಿಎಂ’ನ ‘ಸಿಇಒ’ ಸ್ವೀಕರಿಸುತ್ತಿರುವ 1.61 ಕೋಟಿ ಡಾಲರ್‌ (₨96.12 ಕೋಟಿ) ಹಾಗೂ ಸಿಟಿ ಬ್ಯಾಂಕ್‌ ‘ಸಿಇಒ’ ಪಡೆದು­ಕೊಳ್ಳುತ್ತಿರುವ 1.44 ಕೋಟಿ ಡಾಲರ್‌ (ಸುಮಾರು ₨86 ಕೋಟಿ) ವೇತನಕ್ಕೆ ಹೋಲಿಸಿದರೆ ಸಿಕ್ಕಾ ಅವರ  ವರ್ಷದ ಸಂಬಳ ಇತರ  ‘ಸಿಇಒ’ಗಳ ಸಂಬಳದ ಅರ್ಧಕ್ಕಿಂತಲೂ ಕಡಿಮೆಯೇ ಇದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.