ADVERTISEMENT

ಸಿಧು– ಅಮರಿಂದರ್‌ ಒಳಜಗಳ ಸ್ಫೋಟ

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:34 IST
Last Updated 19 ಮೇ 2019, 19:34 IST

ಚಂಡಿಗಡ: ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಹಾಗೂ ಕಾಂಗ್ರೆಸ್ ಮುಖಂಡ, ರಾಜ್ಯದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ನವಜೋತ್‌ಸಿಂಗ್‌ ಸಿಧು ನಡುವಣ ಒಳಜಗಳ ಮತ್ತೆ ಸ್ಫೋಟಗೊಂಡಿದೆ. ‘ಸಿಧು ಅವರು ತಮ್ಮ ಬೇಜವಾಬ್ದಾರಿಯ ನಡೆಗಳ ಮೂಲಕ ಕಾಂಗ್ರೆಸ್‌ಗೆ ಹಾನಿ ಮಾಡುತ್ತಿದ್ದಾರೆ’ ಎಂದು ಅಮರಿಂದರ್‌ ಸಿಂಗ್‌ ಭಾನುವಾರ ಆರೋಪಿಸಿದ್ದಾರೆ.

‘ಸಿಧು ಮೇಲೆ ನನಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳೇನೂ ಇಲ್ಲ. ಅವರು ‘ಮಹತ್ವಾಕಾಂಕ್ಷಿ’ಯಾಗಿದ್ದು ಮುಖ್ಯಮಂತ್ರಿಯಾಗಬೇಕೆಂದು ಭಾವಿಸಿದಂತಿದೆ’ ಎಂದು ಸಿಂಗ್‌ ಟೀಕಿಸಿದ್ದಾರೆ.

ಮೇ 17ರಂದು ಬಟಿಂಡಾದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ಸಿಧು, ‘2015ರಲ್ಲಿ ಪವಿತ್ರವಾದ ಧರ್ಮಗ್ರಂಥಕ್ಕೆ ಅವಮಾನ ಮಾಡಿದವರ ವಿರುದ್ಧ ಯಾಕೆ ಎಫ್‌ಐಆರ್‌ ದಾಖಲಿಸಿರಲಿಲ್ಲ? ಈ ಘಟನೆಯ ಹಿಂದಿರುವವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ’ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ ಸರ್ಕಾರದ ವಿರುದ್ಧವೇ ಗುಡುಗಿದ್ದರು.

ADVERTISEMENT

ಇದಕ್ಕೆ ಭಾನುವಾರ ಪ್ರತ್ಯುತ್ತರ ನೀಡಿದ ಸಿಂಗ್‌, ‘ಅವರು (ಸಿಧು) ನಿಜವಾದ ಕಾಂಗ್ರೆಸ್‌ ವ್ಯಕ್ತಿಯಾಗಿದ್ದರೆ ಸರ್ಕಾರವನ್ನು ಟೀಕಿಸಲು ಚುನಾವಣಾ ಸಂದರ್ಭದ ಬದಲು ಬೇರೆ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬೇಜವಾಬ್ದಾರಿಯ ಹೇಳಿಕೆಗಳ ಮೂಲಕ ಅವರು ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ. ಚುನಾವಣೆಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡರೆ ಸಾಲದು. ಒಟ್ಟಾರೆ ಕಾಂಗ್ರೆಸ್‌ ಅನ್ನು ಗಮನದಲ್ಲಿಟ್ಟುಕೊಂಡು ಅವರು ಮಾತನಾಡಬೇಕು’ ಎಂದಿದ್ದಾರೆ.

ರಾಜ್ಯದ ಆರೋಗ್ಯ ಸಚಿವ ಬ್ರಹ್ಮ ಮೊಹಿಂದ್ರ ಅವರೂ ಸಿಧು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ‘ಪಕ್ಷಕ್ಕೆ ಅವರಿಂದ ಇನ್ನಷ್ಟು ಹಾನಿಯಾಗುವುದನ್ನು ತಡೆಯಬೇಕು’ ಎಂದು ಹೈಕಮಾಂಡ್‌ಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.