ADVERTISEMENT

ಸಿಯಾಚಿನ್‌ ಸೈನಿಕರ ನೆರವಿಗೆ ಇಸ್ರೊ ತಾಂತ್ರಿಕತೆ

ಹಗುರ ‘ಸ್ಪೇಸ್‌ ಸೂಟ್’, ರೇಡಿಯೊ ಸಂಕೇತ ಉಪಕರಣ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2016, 19:58 IST
Last Updated 3 ಏಪ್ರಿಲ್ 2016, 19:58 IST
ಸಿಯಾಚಿನ್ ನೀರ್ಗಲ್ಲು ಪ್ರದೇಶ
ಸಿಯಾಚಿನ್ ನೀರ್ಗಲ್ಲು ಪ್ರದೇಶ   

ತಿರುವನಂತಪುರ (ಪಿಟಿಐ): ಬಾಹ್ಯಾಕಾಶ ಕಾರ್ಯಕ್ರಮಗಳಿಗೆಂದು  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಂಡರೆ, ಸಿಯಾಚಿನ್‌ನಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾಗುವ ಸೈನಿಕರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಪರಿಗಣಿಸುವ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸೈನಿಕರ ನಿಜವಾದ ಶತ್ರು ಪ್ರಕೃತಿ. –60 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುವ ಉಷ್ಣತೆ, ವೇಗವಾಗಿ ಬೀಸುವ ಹಿಮಗಾಳಿ, ಹಿಮಕುಸಿತ ಇವೇ ಮೊದಲಾದ ಪ್ರಾಕೃತಿಕ ಅಂಶಗಳು ಸೈನಿಕರ ಜೀವ ಹಿಂಡುತ್ತವೆ.  ಸಿಯಾಚಿನ್ ಪ್ರದೇಶವನ್ನು ಮಾನವ ವಾಸಯೋಗ್ಯ ಪ್ರದೇಶವಲ್ಲ ಎಂದು ಘೋಷಿಸಲಾಗಿದೆ.

ಆದರೆ ದೇಶದ ಭದ್ರತೆ ದೃಷ್ಠಿಯಿಂದ ಅಲ್ಲಿ ಸೈನಿಕರನ್ನು ಇರಿಸಲಾಗಿದೆ. ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಸೈನಿಕರು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಬೆಚ್ಚನೆ ಉಡುಪು ಧರಿಸುವುದು ಅವಶ್ಯಕ.  ಅಲ್ಲಿರುವ ಭಾರತದ ಸೈನಿಕರು ಬಳಸುವ ಉಡುಪಗಳ ತೂಕ ಹತ್ತಾರು ಕೆ.ಜಿ ಮೀರುತ್ತದೆ. ಉಡುಪಿನ ತೂಕವೇ ಸೈನಿಕರನ್ನು ಹೈರಾಣಾಗಿಸುತ್ತದೆ.

ಗಗನಯಾನಿಗಳಿಗೆಂದು ಇಸ್ರೊ ಹಗುರವಾದ ‘ಸ್ಪೇಸ್ ಸೂಟ್’ ಅನ್ನು ಅಭಿವೃದ್ಧಿಪಡಿಸಿದೆ. ವಿಶ್ವದಲ್ಲಿ ಈವರೆಗೆ ಅಭಿವೃದ್ಧಿಪಡಿಸಿರುವ ‘ಸ್ಪೇಸ್‌ ಸೂಟ್‌’ಗಳಲ್ಲಿ ಇದೇ ಅತ್ಯಂತ ಹಗುರವಾದದ್ದು. ಅವನ್ನು ತುಸು ಮಾರ್ಪಡಿಸಿ ಸಿಯಾಚಿನ್ ಸೈನಿಕರಿಗೆ ಒದಗಿಸಬಹುದು. ಹಗುರವಾಗಿರುವುದರಿಂದ ಇವು ಸೈನಿಕರಿಗೆ ಹೊರೆ ಆಗುವುದಿಲ್ಲ. ಜತೆಗೆ ಈಗ ಬಳಕೆಯಲ್ಲಿರುವ ಉಡುಪುಗಳಿಗಿಂತ ಈ ಸ್ಪೇಸ್‌ ಸೂಟ್‌ಗಳು ಸೈನಿಕರನ್ನು ಮತ್ತಷ್ಟು ಬೆಚ್ಚಗೆ ಇರಿಸುತ್ತವೆ ಎಂದು ತಿರುವನಂತಪುರದ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಕೆ.ಶಿವನ್ ಹೇಳಿದ್ದಾರೆ.

ಗಗನಯಾನಿಗಳ ಪತ್ತೆಗೆ ಬಳಸುವ ಕೈಗಡಿಯಾರದಂತಹ ರೇಡಿಯೊ ಸಂಕೇತ ಉಪಕರಣವನ್ನು ಸಿಯಾಚಿನ್ ಸೈನಿಕರಿಗೂ ನೀಡಬಹುದು. ಈ ಉಪಕರಣವನ್ನು ಧರಿಸಿದ್ದರೆ, ಸೈನಿಕರು ಎಷ್ಟೇ ಆಳದ ಹಿಮರಾಶಿಯ ಅಡಿ ಸಿಲುಕಿದ್ದರೂ ಕೆಲವೇ ನಿಮಿಷಗಳಲ್ಲಿ  ಪತ್ತೆ ಮಾಡಬಹುದು. ಉಪಗ್ರಹಗಳ ನೆರವಿನಿಂದ ಅತ್ಯಂತ ಕರಾರುವಕ್ಕಾಗಿ ಸೈನಿಕರನ್ನು ಪತ್ತೆ ಮಾಡಬಹುದು ಎಂದು ಶಿವನ್ ತಿಳಿಸಿದ್ದಾರೆ.

ಇಂತಹ ಉಪಕರಣಗಳನ್ನು ಹೊಂದಿದ್ದಿದ್ದರೆ ಈಚೆಗೆ ಸಿಯಾಚಿನ್‌ನಲ್ಲಿ ಹಿಮಕುಸಿತಕ್ಕೆ ಸಿಲುಕಿ ಬಲಿಯಾದ ಲ್ಯಾನ್ಸ್‌ನಾಯಕ ಹನುಮಂತಪ್ಪ ಕೊಪ್ಪದ ಮತ್ತು ಇತರ ಒಂಬತ್ತು ಸೈನಿಕರು ಇದ್ದ ಸ್ಥಳವನ್ನು ಬಹುಬೇಗನೆ ಪತ್ತೆ ಮಾಡಬಹುದಿತ್ತು. ಇದರಿಂದ ಆ ಸೈನಿಕರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.