ನವದೆಹಲಿ (ಪಿಟಿಐ): ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುದ್ದಿ ಬಿತ್ತರಿಸದಿರಲು ಝೀ ನ್ಯೂಸ್ 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿತ್ತು ಎಂದು ಕಾಂಗ್ರೆಸ್ ಸಂಸದ ಮತ್ತು ಉದ್ಯಮಿ ನವೀನ್ ಜಿಂದಾಲ್ ಗಂಭೀರ ಆರೋಪ ಮಾಡ್ದ್ದಿದು, ಆದರೆ ಮಾಧ್ಯಮ ಸಂಸ್ಥೆ ಈ ಆರೋಪವನ್ನು ಅಲ್ಲಗಳೆದಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಂದಾಲ್, ತಮ್ಮ ವಿರುದ್ಧ ವರದಿ ಪ್ರಸಾರವಾಗದಿರಲು ಜೀ ನ್ಯೂಸ್‌ನ ಕಾರ್ಯನಿರ್ವಾಹಕರು ನಾಲ್ಕು ವರ್ಷಗಳ ಕಾಲ 20 ಕೋಟಿ ರೂಪಾಯಿ ನೀಡುವಂತೆ ಕೇಳಿದ್ದರು ಎಂದು ಆರೋಪಿಸಿದರು. ಬಳಿಕ ಮಾತು ಬದಲಾಯಿಸಿದ ಅವರು, 100 ಕೋಟಿ ರೂಪಾಯಿಗಳು ಬೇಡಿಕೆಯನ್ನು ಇಟ್ಟಿದ್ದರು ಎಂದು ಆಪಾದನೆ ಮಾಡಿದರು.
ಇದೇ ಸಂದರ್ಭದಲ್ಲಿ ರಾಯಗಡದ ಆರ್‌ಟಿಐ ಕಾರ್ಯಕರ್ತರ ಕುಟುಂಬ ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರಿಂದ ಸುದ್ದಿಗೋಷ್ಠಿ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.ಹರಾಜು ಮಾಡದೇ ಕಲ್ಲಿದ್ದಲು ಗಣಿ ಹಂಚಿಕೆಯ ಲಾಭ ಪಡೆದಿರುವ ಕಂಪೆನಿಗಳಲ್ಲಿ ಜಿಂದಾಲ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್ (ಜೆಎಸ್‌ಪಿಎಲ್) ಇದೆ ಎಂದು ಮಹಾಲೇಖಪಾಲರ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಕಲ್ಲಿದ್ದಲ್ಲು ಗಣಿ ಹಂಚಿಕೆ ಹಗರಣದಲ್ಲಿ ಜೆಎಸ್‌ಪಿಎಲ್ ಶಾಮಿಲಾಗಿರುವ ಕುರಿತು ವರದಿ ಪ್ರಕಟಿಸಿದ್ದಕ್ಕೆ ಭಯಗೊಂಡು ಇಂತಹ ಆರೋಪ ಮಾಡಲಾಗುತ್ತಿದೆ ಎಂದು ಝೀ ನ್ಯೂಸ್ ಮುಖ್ಯಸ್ಥ ಸುಧೀರ್ ಚೌಧರಿ ಮತ್ತು ಝೀ ಬಿಸ್‌ನೆಸ್ ಮುಖ್ಯಸ್ಥ ಸಮೀರ್ ಅಹ್ಲುವಾಲಿಯಾ ಅವರುಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.