ನವದೆಹಲಿ (ಪಿಟಿಐ): ಸಲ್ಲೇಖನ ವ್ರತ ಅಕ್ರಮ ಎಂದು ಹೇಳಿರುವ ರಾಜಸ್ತಾನ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸ್ಥಾನಕವಾಸಿ ಜೈನ ಶ್ರಾವಕ ಸಂಘ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
‘ಸಂಥಾರ’ (ಸಲ್ಲೇಖನ) ಅಕ್ರಮವಾಗಿದ್ದು, ಭಾರತೀಯ ದಂಡ ಸಂಹಿತೆಯ 306 ಹಾಗೂ 309ರ ಅನ್ವಯ ಆತ್ಮಹತ್ಯೆಗೆ ಪ್ರಚೋದನೆಗೆ ನೀಡುವ ಅಪರಾಧವಾಗಿದೆ ಎಂದು ಆಗಸ್ಟ್ 10ರಂದು ರಾಜಸ್ತಾನ ಹೈಕೋರ್ಟ್ ಆದೇಶ ನೀಡಿತ್ತು.
ಜೈನರ ಧಾರ್ಮಿಕ ವಿಧಿಯನ್ನು ಆತ್ಮಹತ್ಯೆಗೆ ಹೋಲಿಸಿದ ಹೈಕೋರ್ಟ್‌ನ ನಿಲುವು ಸರಿಯಲ್ಲ. ಸಲ್ಲೇಖನ ಒಂದು ಪ್ರಾಚೀನ ವಿಧಿಯಾಗಿದ್ದು, ಜೈನ ಧರ್ಮದಷ್ಟೇ ಹಳೆಯದಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ರಾಜಸ್ತಾನ ಹಾಗೂ ದೇಶದ ಇತರ ನಗರಗಳಲ್ಲಿ ಸುಪ್ರೀಂಕೋರ್ಟ್ ತೀಪಿನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಈ ಅರ್ಜಿ ಸಲ್ಲಿಸಲಾಗಿದೆ.
ಹೆಣ್ಣುಮಕ್ಕಳ ಸಾಗಣೆ ಕ್ರಿಯಾ ಯೋಜನೆಗೆ ಸರ್ಕಾರ ಸಿದ್ಧ: ಲೈಂಗಿಕ ಶೋಷಣೆಗಾಗಿ ಹೆಣ್ಣುಮಕ್ಕಳನ್ನು ಕದ್ದು ಸಾಗಿಸುವುದನ್ನು ತಡೆಯಲು ಕ್ರಿಯಾಯೋಜನೆ ರೂಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಕದ್ದು ಸಾಗಿಸಲಾದ ಹೆಣ್ಣುಮಕ್ಕಳ ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿಗಾಗಿ ರಾಜ್ಯಗಳ ಜತೆ ಚರ್ಚಿಸಿ ಯೋಜನೆ ರೂಪಿಸುವಂತೆ ಅದು ಹೇಳಿದೆ.
ನ್ಯಾಯಮೂರ್ತಿ ಮದನ ಬಿ. ಲೋಕೂರ್, ಕುರಿಯನ್ ಜೋಸಫ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ. ಮಹಿಳೆಯರ ಹಕ್ಕುಗಳಿಗೆ ಹೋರಾಡುವ ಸರ್ಕಾರೇತರ ಸಂಸ್ಥೆ ‘ಪ್ರಜ್ವಲಾ’ ಈ ಸಂಬಂಧ ಅರ್ಜಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.