ನವದೆಹಲಿ: ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆಂದೇ ಇಬ್ಬರು ಸದಸ್ಯರನ್ನು ಒಳಗೊಂಡ ‘ಸಾಮಾಜಿಕ ನ್ಯಾಯ ಪೀಠ’ವನ್ನು ಸುಪ್ರೀಂ ಕೋರ್ಟ್ ಇದೇ ಮೊದಲ ಬಾರಿಗೆ ರಚಿಸಿದೆ.
ಇದು ವಿಷಯಾಧಾರಿತವಾಗಿ ರಚನೆಯಾದ ಎರಡನೇ ಪೀಠ. ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ಈ ಪೀಠಕ್ಕೆ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ಯು.ಯು. ಲಲಿತ್ ಅವರನ್ನು ನೇಮಿಸಿದ್ದಾರೆ.
ಡಿ.12ರಿಂದ ಕಾರ್ಯಾರಂಭ ಮಾಡಲಿರುವ ಈ ಪೀಠವು, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಮತ್ತು ಇನ್ನಿತರ ಅರ್ಜಿಗಳ ಬಗ್ಗೆ ಪ್ರತಿ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸಲಿದೆ.
ಮನೆ ಇಲ್ಲದ ಮಕ್ಕಳಿಗೆ ಸೂರು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ಪಡಿತರ ವಿತರಣಾ ಯೋಜನೆಯ ದಕ್ಷ ಅನುಷ್ಠಾನ ಸೇರಿದಂತೆ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳ ಅರ್ಜಿ ವಿಚಾರಣೆಯನ್ನು ಈ ಪೀಠ ಕೈಗೆತ್ತಿಕೊಳ್ಳಲಿದೆ.
‘ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳು ಹಲವಾರು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಇರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು, ಇವುಗಳ ತ್ವರಿತ ವಿಚಾರಣೆಗೆ ಮತ್ತು ಇಂತಹ ಪ್ರಕರಣಗಳನ್ನು ವಿಶೇಷ ಕಾಳಜಿಯಿಂದ ಪರಿಶೀಲಿಸುವ ಸಲುವಾಗಿ ‘‘ಸಾಮಾಜಿಕ ನ್ಯಾಯ ಪೀಠ’’ ರಚಿಸಿದ್ದಾರೆ. ಈ ಮೂಲಕ ಸಂವಿಧಾನ ನೀಡಿರುವ ಹಕ್ಕುಗಳು ಪರಿಪೂರ್ಣವಾಗಿ ನಾಗರಿಕರಿಗೆ ದೊರಕಲು ಶ್ರಮ ವಹಿಸಿದ್ದಾರೆ’ ಎಂದು ನ್ಯಾಯಾಂಗ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಪೀಠವು 60ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ಪರಿಶೀಲಿಸಲಿದೆ ಮತ್ತು ಸುಪ್ರೀಂ ಕೋರ್ಟ್ ಸಾಮಾಜಿಕ ನ್ಯಾಯ ಪೀಠ ರಚಿಸಿರುವುದರಿಂದ ಸರ್ಕಾರಗಳು ನಾಗರಿಕ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಲಿವೆ’ ಎಂದೂ ತಿಳಿಸಿದ್ದಾರೆ.
ಜೀವನಾವಶ್ಯಕವಾದ ಶುದ್ಧ ಕುಡಿಯುವ ನೀರು ಪೂರೈಕೆ, ಅಪೌಷ್ಟಿಕತೆಯಿಂದ ಮಹಿಳೆಯರ ಮತ್ತು ಮಕ್ಕಳ ಅಕಾಲಿಕ ಮರಣ ತಡೆಗಟ್ಟುವಿಕೆ, ಆರ್ಥಿಕತೆಯೂ ಸೇರಿದಂತೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ನಾಗರಿಕರಿಗೂ ವೈದ್ಯಕೀಯ ಸೇವೆ, ವೇಶ್ಯೆಯರಿಗೆ ಜೀವನ ಭದ್ರತೆ ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು/ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿದೆಯೇ ಎಂಬ ಬಗ್ಗೆ ಈ ಪೀಠ ನಿಗಾ ಇರಿಸಲಿದೆ.
ಹಿಂದಿನ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.
ಕಪ್ಪುಹಣ ತನಿಖೆಗೆ ಗಡುವು
ನವದೆಹಲಿ (ಪಿಟಿಐ): ಜಿನೀವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಭಾರತದ ೬೨೭ ಮಂದಿ ಇಟ್ಟಿದ್ದಾರೆ ಎನ್ನಲಾದ ಕಪ್ಪುಹಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ತನಿಖೆಯು ೨೦೧೫ರ ಮಾರ್ಚ್ ಒಳಗೆ ಮುಕ್ತಾಯಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಕೇಂದ್ರಕ್ಕೆ ಬುಧವಾರ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಈ ಅವಧಿಯಲ್ಲಿ ತನಿಖೆ ಪೂರ್ಣಗೊಳ್ಳದಿದ್ದಲ್ಲಿ ಗಡುವು ವಿಸ್ತರಿಸುವುದಕ್ಕೆ ಕೇಂದ್ರವು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದೂ ಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.