ADVERTISEMENT

ಸೈಕಲ್‌ನಿಂದ ಸಂಸತ್ ವರೆಗೆ -ಪ್ರತಾಪ್ ಚಂದ್ರ ಸಾರಂಗಿ ಎಂಬ ಸರಳ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 5:25 IST
Last Updated 1 ಜೂನ್ 2019, 5:25 IST
   

ನವದೆಹಲಿ: ಅದು ಮೋದಿ ನೂತನ ಸಂಪುಟ ಪ್ರಮಾಣ ವಚನ ಸ್ವೀಕಾರ ವೇದಿಕೆ, ಮೈಕಿನಲ್ಲಿ 56ನೇ ಹೆಸರು ಕರೆಯುತ್ತಿದ್ದಂತೆ ಅಲ್ಲೊಬ್ಬ ಕೆದರಿದ ಬಿಳಿ ತಲೆಕೂದಲ ವ್ಯಕ್ತಿ, ಬಿಳಿ ಗಡ್ಡಧಾರಿ ವೇದಿಕೆ ಮೇಲೆ ಬರುತ್ತಿದ್ದರೆ, ವಿದೇಶೀ ಗಣ್ಯರು, ಪ್ರೇಕ್ಷಕರು ತುಂಬಿದ್ದ ರಾಷ್ಟ್ರಪತಿ ಭವನದ ತುಂಬ ಕಿವಿಗಡಚಿಕ್ಕುವ ಚಪ್ಪಾಳೆ.

ಅರೆ ಯಾರಿದು? ಎಂಬ ಪ್ರಶ್ನೆ ದೇಶದ ಜನರಲ್ಲಿ ಆ ಕ್ಷಣ ಮೂಡದೆ ಇರದು. ಹೌದು ಅವರೇ 64 ವರ್ಷ ವಯಸ್ಸಿನ ಪ್ರತಾಪ್ ಚಂದ್ರ ಸಾರಂಗಿ, ಒಡಿಸ್ಸಾದ ಬಾಲಸೋರ್ ಲೋಕಸಭಾ ಕ್ಷೇತ್ರದ ಸಂಸದ. ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆ. ಮೊದಲ ಯತ್ನದಲ್ಲಿಯೇ ಕೇಂದ್ರ ಮಂತ್ರಿ. ಇಂತಹ ವಿಷಯಗಳನ್ನು ಕೇಳಿದಾಗ ಹಾಗೂ ಕಣ್ಣಾರೆ ನೋಡಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ.

ADVERTISEMENT

ಯಾಕೆಂದರೆ, ಪ್ರತಾಪ್ ಚಂದ್ರ ಸಾರಂಗಿ ಎಂದರೆ ದೇಶದ ಜನರಿಗೆ ಅಷ್ಟಾಗಿ ಪರಿಚಯವಿಲ್ಲ. ಆದರೆ, ಒಡಿಸ್ಸಾದ ಜನತೆಗೆ ಚಿರಪರಿಚಿತ. ನೇರ ಮಾತು, ಸರಳ ವ್ಯಕ್ತಿತ್ವ. ಧರಿಸುವ ಬಟ್ಟೆ, ವಾಸಿಸುವ ಮನೆ, ಜೀವಿಸುವ ಜೀವನ ಎಲ್ಲವೂ ಸರಳ. ₹ 72 ಕೋಟಿ ಆಸ್ತಿ ಇರುವ ವ್ಯಕ್ತಿಯ ಎದುರು ಕೇವಲ ₹ 1.5 ಲಕ್ಷ ಇರುವ ವ್ಯಕ್ತಿ ಪ್ರತಾಪ್ ಚಂದ್ರ ಸಾರಂಗಿ ಸ್ಪರ್ಧಿಸಿ ಗೆದ್ದು ಬಂದಿದ್ದಾರೆ.

ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸೂಚನೆ ಬಂದಿದೆ ಎಂದು ತಿಳಿದಾಗ ಕೇವಲ ಒಂದು ಜೊತೆ ಬಟ್ಟೆಯನ್ನು ತೆಗೆದು ಇಸ್ತ್ರಿ ಮಾಡಿ ಅದೇ ಬಟ್ಟೆ ಬ್ಯಾಗಿಗೆ ಹಾಕಿಕೊಂಡು ಬಸ್ಸು ಹತ್ತಿದ ವ್ಯಕ್ತಿ ಪ್ರತಾಪ್ ಚಂದ್ರ ಸಾರಂಗಿ. ಮನೆಯಿಂದ ದೆಹಲಿಗೆ ಹೊರಡುವ ಸಾರಂಗಿ ಅವರ ಚಿತ್ರಗಳುಟ್ವಿಟರ್ ನಲ್ಲಿ ಹರಿದಾಡುತ್ತಲೇ ಸುದ್ದಿಯಾದವು.

ಒಡಿಸ್ಸಾದಲ್ಲಿ ಪ್ರತಾಪ್ ಚಂದ್ರ ಸಾರಂಗಿ ಬಗ್ಗೆ ಗೊತ್ತಿದೆ. ಸ್ಥಳೀಯ ಟಿವಿ ಚಾನಲ್ ಸಂದರ್ಶನದಲ್ಲಿ ಪ್ರಶ್ನೆಯೊಂದನ್ನು ಕೇಳಲಾಯಿತು. ಅದುನೀವು ಅವಿವಾಹಿತರೋ ಅಥವಾ ಬ್ರಹ್ಮಚಾರಿಯೋ ಎಂಬಪ್ರಶ್ನೆ. ಈ ಪ್ರಶ್ನೆಗೆ ನಾನು ಬ್ರಹ್ಮಚಾರಿಯಾಗಲು ಸಾಧ್ಯವೇ ಇಲ್ಲ. ನಾನು ಅವಿವಾಹಿತ ಎಂದಷ್ಟೇ ಉತ್ತರ ಹೇಳಿದಂತಹ ವ್ಯಕ್ತಿ.

ಸಾರಂಗಿ ತಮ್ಮ 28 ವಯಸ್ಸಿನಲ್ಲಿ ಬೇಳೂರು ಮಠದಲ್ಲಿ ರಾಮಕೃಷ್ಣ ಮಠಕ್ಕೆ ಆಧ್ಯಾತ್ಮದ ಬಗ್ಗೆ ತಿಳಿಯಲುಹೋದಾಗ ಅಲ್ಲಿ ಸ್ವಾಮಿ ಅತ್ಮಾಸ್ಥಾನಂದಅವರ ಬಳಿ ಹೋದರು. ಸ್ವಾಮಿ ಅವರು ಕೇಳಿದ ಒಂದು ಪ್ರಶ್ನೆ ಎಂದರೆನಿನ್ನನ್ನು ಅವಲಂಬಿಸಿರುವಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆಕೇಳಿದ್ದರು. ಆ ಕ್ಷಣದಲ್ಲಿ ದೊರೆತ ವಿವರಣೆಯಿಂದಅವರು ಅವಿವಾಹಿತರಾಗಿಯೇ ಉಳಿದಿದ್ದಾರೆ.

ಒಡಿಸ್ಸಾದಲ್ಲಿ ಪ್ರತಾಪ್ ಚಂದ್ರಸಾರಂಗಿ ಕೇವಲ ಸೈಕಲ್ ತುಳಿದೇ ಚುನಾವಣಾ ಪ್ರಚಾರ ನಡೆಸಿಯೇ ಮತದಾರರ ಮನಸ್ಸು ಗೆದ್ದವರು. ಇಬ್ಬರು ಘಟಾನುಘಟಿಗಳ ವಿರುದ್ಧ ಹೋರಾಡಿ ಸಂಸದನಾಗಿ ಆಯ್ಕೆಯಾದವರು.ಒಬ್ಬರು ಒಡಿಸ್ಸಾ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಪುತ್ರನವಜ್ಯೋತಿ ಪಟ್ನಾಯಕ್, ಇವರ ಒಟ್ಟು ಆಸ್ತಿ ₹ 104 ಕೋಟಿ. ಮತ್ತೊಬ್ಬ ಶ್ರೀಮಂತ ಬಿಜೆಡಿ ರಬೀಂದ್ರಜೆನಾ, ಇವರ ಒಟ್ಟು ಆಸ್ತಿ ಮೌಲ್ಯ ₹ 72 ಕೋಟಿ. ಇವರ ಮಧ್ಯೆ ಕೇವಲ ₹ 1.5 ಲಕ್ಷ ಇಟ್ಟುಕೊಂಡ ಪ್ರತಾಪ್ ಚಂದ್ರ ಸಾರಂಗಿ 12 ಸಾವಿರ ಮತಗಳ ಅಂತರದಲ್ಲಿ ಗೆದ್ದು ಸಂಸದರಾದರು.

ಸಾರಂಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಮ್ಮ ಪ್ರಮಾಣ ಪತ್ರದಲ್ಲಿ ಚರಾಸ್ತಿ ₹ 1.5ಲಕ್ಷ ಹಾಗೂ ಸ್ಥಿರಾಸ್ತಿ 15 ಲಕ್ಷ ಎಂದು ತಿಳಿಸಿದ್ದಾರೆ. ಅಲ್ಲದೆ, ಇವರ ವಿರುದ್ದ ನಾಲ್ಕು ಕ್ರಿಮಿನಲ್ ಕೇಸುಗಳಿವೆ. ಪಿಂಚಣಿ ಹಾಗೂ ಕೃಷಿಯಿಂದ ಬರುವ ಆದಾಯದಿಂದ ಜೀವನ ನಡೆಸುವುದಾಗಿ ತಿಳಿಸಿದ್ದಾರೆ.

ಒಡಿಸ್ಸಾದ ಬಾಲಸೋರ್ ಹಾಗೂ ಮಯೂರಭಂಜ್ ಜಿಲ್ಲೆಗಳಲ್ಲಿ ಗಣ ಶಿಕ್ಷ ಮಂದಿರ್ ಯೋಜನೆ ಅಡಿಯಲ್ಲಿ ಇಲ್ಲಿನ ಬುಡಕಟ್ಟು ಜನರ ಅಭಿವೃದ್ದಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ಹಮ್ಮಿಕೊಂಡು ಅದರಲ್ಲಿ ಸಫಲತೆಯನ್ನೂ ಕಂಡಿದ್ದಾರೆ. ಅಲ್ಲದೆ, ಮದ್ಯಪಾನ ವಿರೋಧಿ ಚಳವಳಿ, ಯಾವುದೇ ಸ್ಥಳೀಯ ಸಮಸ್ಯೆಯಿರುವ ಪ್ರತಿಭಟನೆ ಇರಲಿ ಪ್ರತಾಪ್ ಚಂದ್ರ ಸಾರಂಗಿ ತಪ್ಪದೆ ಭಾಗವಹಿಸುತ್ತಿದ್ದರು.

ಇವರ ಪ್ರತಿಸ್ಪರ್ಧಿ ರಬೀಂದ್ರ ಜೆನಾ ವಿರುದ್ಧ ಹಲವು ಹಗರಣಗಳು ಕೇಳಿಬಂದವು. ಅವುಗಳಲ್ಲಿ ಒಳನಾಡು ಸಾರಿಗೆ ಕೂಡ ಮುಖ್ಯವಾದದ್ದು, ಜೆನಾ ಅವರನ್ನು ಚಿಟ್ ಫಂಡ್ ಹಗರಣದಲ್ಲಿ ಸಿಬಿಐ ವಿಚಾರಣೆ ನಡೆಸುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿಯೇ ಜೆನಾ ಅವರನ್ನು ಸಿಬಿಐ ಕರೆದು ವಿಚಾರಣೆಗೆ ಒಳಪಡಿಸಿತ್ತು. ಈ ಕಾರಣಗಳಿಂದಾಗಿ ಜೆನಾ ಪ್ರಚಾರದಲ್ಲಿ ಅಷ್ಟೇನೂ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಾರಂಗಿ ಸಕ್ರಿಯವಾಗಿದ್ದು ಇವರ ಗೆಲುವಿಗೆ ಸಹಕಾರಿಯಾಯಿತು ಎನ್ನಲಾಗಿದೆ. ಇದಲ್ಲದೆ, ಸಾರಂಗಿ ಒಡಿಸ್ಸಾ ಬಜರಂಗದಳದ ರಾಜ್ಯ ಅಧ್ಯಕ್ಷರಾಗಿ, ವಿಎಚ್‌‌ಪಿಯ ರಾಜ್ಯಮಟ್ಟದ ಹಿರಿಯ ಸದಸ್ಯನಾಗಿ ಸೇವೆಸಲ್ಲಿಸಿದ್ದಾರೆ.

ಒಡಿಸ್ಸಾ ವಿಧಾನಸಭೆಗೆ ಎರಡು ಬಾರಿ ಆಯ್ಕೆಯಾಗಿರುವ ಸಾರಂಗಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಪ್ರಯತ್ನಿಸಿದ್ದರು. ಮೊದಲ ಪ್ರಯತ್ನದಲ್ಲಿಯೇ ವಿಜಯಿಯಾಗಿ, ಈಗ ಮಂತ್ರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.