ADVERTISEMENT

ಸೋನು ನಿಗಮ್‌ ದೇಶ ತೊರೆಯಲಿ: ಮೌಲ್ವಿ

ಪಿಟಿಐ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಸೋನು ನಿಗಮ್‌
ಸೋನು ನಿಗಮ್‌   

ಕೋಲ್ಕತ್ತ: ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಬಳಸುವುದರ ವಿರುದ್ಧ ಹೇಳಿಕೆ ನೀಡುವ ಮೂಲಕ ಗಾಯಕ ಸೋನು ನಿಗಮ್‌ ಸಂವಿಧಾನಕ್ಕೆ ಅಗೌರವ ತಂದಿದ್ದಾರೆ ಎಂದು ಮೌಲ್ವಿ ಸೈಯದ್‌ ಷಾ ಅತೆಫ್‌ ಅಲಿ ಅಲ್‌ ಖಾದ್ರಿ ಗುರುವಾರ ಹೇಳಿದ್ದಾರೆ.

‘ಇಂತಹ ವ್ಯಕ್ತಿ ದೇಶ ತೊರೆಯುವ ಬಗ್ಗೆ ಯೋಚಿಸಬೇಕು ಎಂದು ನನಗೆ ಅನ್ನಿಸುತ್ತದೆ’ ಎಂದು  ಪಶ್ಚಿಮ ಬಂಗಾಳ ಅಲ್ಪಸಂಖ್ಯಾತ ಸಂಯುಕ್ತ ಮಂಡಳಿಯ ಉಪಾಧ್ಯಕ್ಷರಾಗಿರುವ ಖಾದ್ರಿ ಹೇಳಿದ್ದಾರೆ.

‘ಬಾಂಗ್‌ (ಪ್ರಾರ್ಥನೆಯ ಕರೆ) ವಿರುದ್ಧವಾಗಿ ಮಾತನಾಡುವ ಮೂಲಕ ಸೋನು ನಿಗಮ್‌, ಭಾರತದ ಹಲವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ತಾವು ಮಾಡಿರುವ ತಪ್ಪು ಒಪ್ಪಿಕೊಂಡು ಅವರು  ಕ್ಷಮೆ ಯಾಚಿಸಬೇಕು’ ಎಂದು ಖಾದ್ರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ಷರತ್ತು ಪೂರೈಸಲಿ: ತಾವು ಘೋಷಿಸಿರುವ ₹10 ಲಕ್ಷ ಬಹುಮಾನ ನೀಡಬೇಕಾದರೆ ಸೋನು ತಮ್ಮ ಇನ್ನೆರಡು ಷರತ್ತುಗಳನ್ನು ಪೂರೈಸಬೇಕು ಎಂದು ಅವರು ಹೇಳಿದ್ದಾರೆ.

‘ಅವರು ತಲೆ ಬೋಳಿಸಿಕೊಂಡಿದ್ದಾರೆ. ಆದರೆ, ನನ್ನ ಇನ್ನೆರಡು ಷರತ್ತುಗಳನ್ನು ಅವರು ಪೂರೈಸಬೇಕಿದೆ. ಅವುಗಳನ್ನು ಈಡೇರಿಸಿದರೆ, ಸುದ್ದಿಗೋಷ್ಠಿ ಕರೆದು ₹10 ಲಕ್ಷದ ಚೆಕ್‌ ಅನ್ನು ಅವರಿಗೆ ಹಸ್ತಾಂತರಿಸುತ್ತೇನೆ’ ಎಂದು ಖಾದ್ರಿ ಸವಾಲು ಎಸೆದಿದ್ದಾರೆ.

ಮುಂಜಾನೆ ಮಸೀದಿಗಳಲ್ಲಿ ಹೇಳುವ ‘ಬಾಂಗ್‌’ಗೆ ಆಕ್ಷೇಪಿಸಿ ಸೋನು ನಿಗಮ್‌ ಮಾಡಿದ್ದ ಟ್ವೀಟ್‌ಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ಖಾದ್ರಿ,  ಗಾಯಕನ  ತಲೆ ಬೋಳಿಸಿ,  ಅವರಿಗೆ ಹಳೆಯ ಪಾದರಕ್ಷೆಗಳ ಹಾರ ಹಾಕಿ ಅವರನ್ನು ದೇಶದಾದ್ಯಂತ ಸುತ್ತಿಸಿದವರಿಗೆ ₹ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಈ ಸವಾಲನ್ನು ಸ್ವೀಕರಿಸಿದ್ದ ಗಾಯಕ, ಬುಧವಾರ ತಲೆ ಬೋಳಿಸಿಕೊಂಡಿದ್ದರು. ಅಲ್ಲದೆ ತಮ್ಮ ಟ್ವೀಟ್‌ಗಳ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದರು.

**

‘ಹಿಂದಿ ಚಿತ್ರೋದ್ಯಮ ಜಾತ್ಯತೀತ’

ನವದೆಹಲಿ (ಐಎಎನ್‌ಎಸ್‌): ಇತರರಿಗೆ ಹೋಲಿಸಿದರೆ ಧರ್ಮದ ವಿಚಾರದಲ್ಲಿ ಹಿಂದಿ ಚಿತ್ರೋದ್ಯಮ ಅತ್ಯಂತ ಜಾತ್ಯತೀತ ಎಂದು ಬಾಲಿವುಡ್‌ ನಟಿ ರವೀನಾ ಟಂಡನ್‌ ಹೇಳಿದ್ದಾರೆ.

ಸೋನು ನಿಗಮ್‌ ಟ್ವೀಟ್‌ ಬಗ್ಗೆ ಕೇಳಿದ  ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಧರ್ಮಾಂಧತೆ ತಪ್ಪು. ನಾವು ಯಾವಾಗಲೂ ಜಾತ್ಯತೀತ ಮತ್ತು ಪ್ರಬಲ ರಾಷ್ಟ್ರವಾಗಿಯೇ ಇದ್ದೆವು. ಮುಂದೆಯೂ ಹಾಗೇ ಇರುವುದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಹೇಳಿದ್ದಾರೆ.

‘ಆಧುನಿಕ, ಹೆಚ್ಚು ಜಾತ್ಯತೀತ ಮತ್ತು ಉದಾರ ಭಾರತದತ್ತ ನಾವು ಮುನ್ನಡೆಯುವ ಅಗತ್ಯವಿದೆ ಎಂಬುದು ನನ್ನ ಭಾವನೆ’  ಎಂದು ರವೀನಾ ಅಭಿಪ್ರಾಯಪಟ್ಟಿದ್ದಾರೆ.

**

ಧನ್ಯವಾದ. ಕೊನೆಗೂ ನಿಮ್ಮಲ್ಲಿ ಅನೇಕರು ವಿವೇಕಯುತವಾಗಿ ಯೋಚಿಸುತ್ತಿದ್ದೀರಿ ಮತ್ತು  ನನ್ನ ಪ್ರಾಮಾಣಿಕ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದೀರಿ. ಸುಂದರವಾದ ಈ ಜಗತ್ತನ್ನು ಶಾಂತವಾಗಿಟ್ಟುಕೊಳ್ಳಿ.
–ಸೋನು ನಿಗಮ್‌, ಗಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.