ನವದೆಹಲಿ (ಪಿಟಿಐ): ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 28ಕ್ಕೆ ಸಾಕ್ಷ್ಯಗಳನ್ನು ಸಲ್ಲಿಸುವಂತೆ ದೂರುದಾರ ಅಹಮೀರ್ ಖಾನ್ ಅವರಿಗೆ ಸೂಚಿಸಿದೆ.
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿ ಮೆಟ್ರೊ ಪಾಲಿಟಿನ್ ನ್ಯಾಯಾಲಯದ ನ್ಯಾಯಮೂರ್ತಿ ಆಕಾಶ್ ಜೈನ್ ಅವರ ಎದುರು ದೂರುದಾರ ಅಹಮೀರ್ ಖಾನ್ ಪರ ಹಿರಿಯ ವಕೀಲ ಕೆ.ಕೆ. ಮೆನನ್ ವಾದ ಮಂಡಿಸಿದ್ದರು. ದೆಹಲಿ ನ್ಯಾಯಾಲಯ ಜೂನ್ 24ಕ್ಕೆ ಈ ತೀರ್ಪು ಕಾಯ್ದಿರಿಸಿತ್ತು. ಬುಧವಾರ ಈ ಪ್ರಕರಣ ಕೈಗೆತ್ತಿಕೊಂಡ ಕೋರ್ಟ್ ವಿಚಾರಣೆಗೆ ಸಮ್ಮತಿ ಸೂಚಿಸಿತು.
ಏಪ್ರಿಲ್ 2004ರಲ್ಲಿ ಲೋಕಸಭೆಗೆ ನಡೆದ ಚುನಾವಣೆಗೆ ಸ್ಪರ್ಧಿಸಿದ್ದ ಸಚಿವೆ ಇರಾನಿ ಅವರು ಪ್ರಮಾಣಪತ್ರದಲ್ಲಿ ದಾಖಲಿಸಿರುವಂತೆ ದೆಹಲಿ ವಿಶ್ವವಿದ್ಯಾಲಯದಿಂದ 1996ರಲ್ಲಿ (ದೂರ ಸಂಪರ್ಕ ಶಿಕ್ಷಣ ಯೋಜನೆಯಡಿ) ಬಿ.ಎ ಪದವಿ ಪಡೆದುಕೊಂಡಿದ್ದಾಗಿ ಘೋಷಿಸಿಕೊಂಡಿದ್ದಾರೆ ಮತ್ತು ಗುಜರಾತ್‌ನಿಂದ ರಾಜ್ಯಸಭೆಗೆ ಸ್ಪರ್ಧೆ ನಡೆಸಿದ ಸಂದರ್ಭ (ಜುಲೈ 11, 2011) ದೂರ ಸಂಪರ್ಕ ಶಿಕ್ಷಣದ ಮೂಲಕ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪ್ರಥಮ ಎಂದು ಘೋಷಿಸಿಕೊಂಡಿದ್ದಾರೆ ಎನ್ನುವುದನ್ನು ವಕೀಲರು ಉಲ್ಲೇಖಿಸಿದರು.
2014ರಲ್ಲಿ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇರಾನಿ ದೆಹಲಿ ಮುಕ್ತ ವಿಶ್ವವಿದ್ಯಾಲಯದಿಂದ ‘ಬಿ.ಕಾಂ ಪ್ರಥಮ’ ಎಂದು ಘೋಷಿಸಿಕೊಂಡಿದ್ದಾರೆ ಎಂದು ಕೆ.ಕೆ. ಮೆನನ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.