ADVERTISEMENT

ಹತ್ಯೆ ಭೀತಿಯಲ್ಲಿ ಮೋದಿ ಪತ್ನಿ!

ಭದ್ರತಾ ಸಿಬ್ಬಂದಿ ಬಗ್ಗೆ ಗುಮಾನಿ: ಮಾಹಿತಿ ಕೋರಿದ ಜಶೋದಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:48 IST
Last Updated 24 ನವೆಂಬರ್ 2014, 19:48 IST

ಮೆಹ್ಸನಾ (ಗುಜರಾತ್‌) (ಪಿಟಿಐ): ತಮಗೆ ನೀಡಲಾಗಿರುವ ಭದ್ರತೆ ಕುರಿತು ಹೆಚ್ಚಿನ ಮಾಹಿತಿ ಒದಗಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್‌ ಸೋಮವಾರ  ಮಾಹಿತಿ ಹಕ್ಕು ಕಾಯ್ದೆ ಅಡಿ ಇಲ್ಲಿಯ ಪೊಲೀಸ್‌ ಠಾಣೆಗೆ ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಖುದ್ದಾಗಿ ತೆರಳಿದ ಜಶೋದಾ ಆರ್‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರು.

ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ಪತ್ನಿಯಾಗಿ ತಮಗಿರುವ ಹಕ್ಕುಗಳು ಮತ್ತು ಸದ್ಯ ತಮಗೆ ನೀಡಿರುವ ಭದ್ರತೆಯ ಸ್ವರೂಪದ ಕುರಿತು ಮಾಹಿತಿ ಒದಗಿಸುವಂತೆ ಅವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದಾರೆ. ನಿಗದಿತ ಅವಧಿ­ಯಲ್ಲಿ ಅವರಿಗೆ ಲಿಖಿತ ಉತ್ತರ ನೀಡಲಾ­ಗು­ವುದು  ಎಂದು ಮೆಹ್ಸನಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಜಶೋದಾ ಸದ್ಯ ತಮ್ಮ ಸಹೋದರ ಅಶೋಕ್‌ ಮೋದಿ ಅವರೊಂದಿಗೆ ಮೆಹ್ಸನಾ ಜಿಲ್ಲೆಯ ಉನ್ಜಾ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ನಂತರ ಶಿಷ್ಟಾಚಾರದಂತೆ ಜಶೋದಾ ಅವರಿಗೆ  ಭದ್ರತೆ ಕಲ್ಪಿಸಲಾಗಿದೆ. ಅವರ ಭದ್ರತೆಗಾಗಿ ಹತ್ತು ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರತಿ ಪಾಳಿಯಲ್ಲಿ ಐದು ಜನರಂತೆ ಎರಡು ಪಾಳಿಯಲ್ಲಿ ಪೊಲೀಸರು ಭದ್ರತೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರಧಾನಿ ಪತ್ನಿಯಾದ ತಾವು ಸಾಮಾನ್ಯರಂತೆ ಬಸ್‌ ಹಾಗೂ ಇನ್ನಿತರ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವಾಗ ತಮ್ಮ ಭದ್ರತೆಗೆ ನಿಯೋಜಿಸಿರುವ ಪೊಲೀಸರು ಸರ್ಕಾರಿ ಕಾರುಗಳನ್ನು ಬಳಸುತ್ತಿರುವ ಕುರಿತು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಒದಗಿಸಿರುವ ಭದ್ರತೆಯ ರೀತಿಯ ಬಗ್ಗೆಯೂ ಅವರಿಗೆ ಸಮಾಧಾನ ಇಲ್ಲ.

ಇಂದಿರಾ ಹತ್ಯೆಯ ಕನವರಿಕೆ
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಭದ್ರತಾ ಸಿಬ್ಬಂದಿ­ಯಿಂದಲೇ ಹತ್ಯೆಯಾದ  ಘಟನೆಯಿಂದ ಭಯಭೀತರಾಗಿರುವ ಜಶೋದಾ, ತಮ್ಮ ಭದ್ರತಾ ಸಿಬ್ಬಂದಿಯನ್ನು ಗುಮಾನಿಯಿಂದಲೇ  ನೋಡುತ್ತಿದ್ದಾರೆ. ರಕ್ಷಣೆಗೆ ನೇಮಕ ಮಾಡಿರುವ ಭದ್ರತಾ ಸಿಬ್ಬಂದಿಗೆ ನೀಡಲಾಗಿರುವ ನಿಯೋಜನೆಯ ಆದೇಶದ ಪ್ರತಿಯನ್ನು ಕಡ್ಡಾಯವಾಗಿ ತಮಗೆ ತೋರಿಸುವಂತೆ ಸೂಚನೆ ನೀಡಬೇಕು ಎಂದೂ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT