ಪಂಚಕುಲ, ಹರಿಯಾಣ (ಪಿಟಿಐ): ಮನೋಹರ್ ಲಾಲ್ ಖಟ್ಟರ್ ಅವರು ಹರಿಯಾಣದ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಹರಿಯಾಣದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸಿದೆ.
ಕರನಾಲ್ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಹರಿಯಾಣ ವಿಧಾನಸಭೆಗೆ ಆಯ್ಕೆಯಾಗಿರುವ 60 ವರ್ಷದ ಖಟ್ಟರ್ ಅವರಿಗೆ ರಾಜ್ಯಪಾಲ ಕಪ್ಟನ್ ಸಿಂಗ್ ಸೋಲಂಕಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಇಲ್ಲಿ ನಡೆದ ಸಮಾರಂಭದಲ್ಲಿ ಖಟ್ಟರ್ ಅವರೊಂದಿಗೆ ಒಂಬತ್ತು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೋದಿ ಆಪ್ತರು ಎಂದೇ ಜನಜನಿತರಾಗಿರುವ ಖಟ್ಟರ್ ಅವರು ಹರಿಯಾಣ ರಾಜ್ಯ ಕಂಡ ಮೊದಲ ಜಾಟ್ ಸಮುದಾಯೇತರ ಮುಖ್ಯಮಂತ್ರಿ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.
ಒಂಬತ್ತು ಸಚಿವರಲ್ಲಿ–ಕವಿತಾ ಜೈನ್, ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ರಾಮ್ ಬಿಲಾಸ್ ಶರ್ಮಾ, ಅಭಿಮನ್ಯು, ಓಂ ಪ್ರಕಾಶ್ ಧನ್ಕರ್, ಅನಿಲ್ ವಿಜ್ ಹಾಗೂ ನಾರ್ಬಿರ್ ಸಿಂಗ್–ಆರು ಜನರು ಸಂಪುಟ ದರ್ಜೆ ಸಚಿವರು.
ಇನ್ನುಳಿದ ಮೂವರಾದ ವಿಕ್ರಮ್ ಸಿಂಗ್ ಠೆಕೆದಾರ್, ಕೃಷ್ಣನ್ ಕುಮಾರ್ ಬೇಡಿ ಹಾಗೂ ಕರಣ್‌ದೇವ್ ಕಂಬೋಜ್ ಅವರು ರಾಜ್ಯ ಖ್ಯಾತೆ (ಸ್ವತಂತ್ರ) ಸಚಿವರು.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಸುಷ್ಮಾ ಸ್ವರಾಜ್, ಪಿಯೂಶ್ ಗೋಯಲ್, ರಾಮ್‌ವಿಲಾಸ್ ಪಾಸ್ವಾನ್, ಕೃಷ್ಣನ್ ಪಾಲ್ ಗುಜ್ಜರ್, ಮನೇಕಾ ಗಾಂಧಿ, ಹಾಗೂ ಅನಂತ್ ಕುಮಾರ್ ಅವರು ಸಮಾರಂಭದಲ್ಲಿ ಹಾಜರಿದ್ದರು.
ಪ್ರಮಾಣ ವಚನ ಸಮಾರಂಭ ಸಾಂಪ್ರದಾಯಿಕವಾಗಿ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ರಾಜಧಾನಿಯಾಗಿರುವ ಚಂಡೀಗಡದಲ್ಲಿರುವ ರಾಜಭವನದಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಸಮಾರಂಭ ಪಂಚಕುಲದಲ್ಲಿ ನಡೆದಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.