ಭೋಪಾಲ್ : ಮಂದಸೌರ್ ಜಿಲ್ಲೆಯಲ್ಲಿನ ರೈತರ ಪ್ರತಿಭಟನೆ ಕಾವು ಈಗ ರಾಜಧಾನಿ ಭೋಪಾಲ್‌ಗೂ ವ್ಯಾಪಿಸಿದೆ. ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಆಕ್ರೋಶಗೊಂಡ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದರು.
ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು 27 ಮಂದಿಯನ್ನು ಬಂಧಿಸಿದರು. ಬಂಧಿತರಲ್ಲಿ ಕಾಂಗ್ರೆಸ್‌ನ 19 ಕಾರ್ಯಕರ್ತರು ಸೇರಿದ್ದಾರೆ.
‘ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದ ಸಮೀಪ ಕೆಲವು ಅಪರಿಚಿತ ವ್ಯಕ್ತಿಗಳು ಟ್ರಕ್‌ಗೆ ಬೆಂಕಿ ಹಚ್ಚಿದರು. ಮತ್ತೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ ಲಾಠಿ ಪ್ರಹಾರ ನಡೆಸಲಾಯಿತು’ ಎಂದು ಡಿಐಜಿ ರಮಣ್ ಸಿಂಗ್ ಸಿಕರ್ವಾರ್ ತಿಳಿಸಿದರು.
ಕಳೆದ ಒಂಬತ್ತು ದಿನಗಳಿಂದ ಮಧ್ಯಪ್ರದೇಶದ ಪಶ್ಚಿಮ ಭಾಗದಲ್ಲಿ ರೈತರು ಸಾಲಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂದಸೌರ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೋಲಿಸರು ನಡೆಸಿದ ಗೋಲಿಬಾರ್‌ನಲ್ಲಿ ಆರು ಮಂದಿ ಸಾವಿಗೀಡಾಗಿದ್ದರು.
ಇಂದು ಸಿ.ಎಂ ಉಪವಾಸ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಶನಿವಾರ ಉಪವಾಸ ಕೈಗೊಂಡು, ನಗರದ ದಸರಾ ಮೈದಾನದಲ್ಲಿ ಮುಕ್ತವಾಗಿ ರೈತರ ಅಹವಾಲುಗಳನ್ನು ಆಲಿಸಲಿದ್ದಾರೆ.
ರಾಜ್ಯದಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವುದರಿಂದ ಶಿವರಾಜ್‌ಸಿಂಗ್ ಚೌಹಾಣ್ ಈ ನಿರ್ಧಾರ ಕೈಗೊಂಡಿದ್ದಾರೆ. ‘ಶನಿವಾರ ನಾನು ಉಪವಾಸ ಕುಳಿತುಕೊಂಡು ಬಯಲು ಪ್ರದೇಶದಲ್ಲೇ ಸರ್ಕಾರ ನಡೆಸುತ್ತೇನೆ. ರೈತರು ಮುಕ್ತವಾಗಿ ಚರ್ಚೆಗೆ ಬರಲಿ’ ಎಂದು ಅವರು ತಿಳಿಸಿದ್ದಾರೆ.
ಮಂದಸೌರ್: ಮತ್ತೊಬ್ಬ ರೈತ ಸಾವು
ಮಂದಸೌರ್ : ಗಲಭೆ ಪೀಡಿತ ಮಂದಸೌರ್ ಜಿಲ್ಲೆಯ ಬಡಾವನ್ ಗ್ರಾಮದಲ್ಲಿ ಶುಕ್ರವಾರ ಮತ್ತೊಬ್ಬ ರೈತ ಮೃತಪಟ್ಟಿದ್ದಾನೆ. ಪೊಲೀಸರ ಏಟಿನಿಂದಾಗಿಯೇ ರೈತ ಘನಶ್ಯಾಮ ಧಾಕಡ್‌್್ (26) ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದರು.
ಆದರೆ ಘನಶ್ಯಾಮ್ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಘನಶ್ಯಾಮ್ ಗುರುವಾರ ಸಂಜೆ ದೇವಾಲಯಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಪೊಲೀಸರು ಆತನನ್ನು ತಡೆಹಿಡಿದು ಹೊಡೆದಿದ್ದಾರೆ. ಇಂದೋರ್‌ನ ಎಂವೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆತ ಮೃತಪಟ್ಟ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.