ADVERTISEMENT

ಹುಡುಗಿಯರ ರಾತ್ರಿ ಸಂಚಾರ ಸಂಸ್ಕೃತಿಗೆ ವಿರುದ್ಧ: ಶರ್ಮಾ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2015, 11:35 IST
Last Updated 19 ಸೆಪ್ಟೆಂಬರ್ 2015, 11:35 IST

ನವದೆಹಲಿ: ಅಬ್ದುಲ್‌ ಕಲಾಂ ಮತ್ತು ಭಾರತೀಯ ಮುಸ್ಲಿಮರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ಶನಿವಾರ ಮತ್ತೊಂದು ವಿವಾದಿತ ಹೇಳಿಕೆ  ನೀಡಿದ್ದಾರೆ.

‘ರಾತ್ರಿ ವೇಳೆ ಹುಡುಗಿಯರು ಹೊರಗೆ ಓಡಾಡೋದು ಭಾರತೀಯ ಸಂಸ್ಕೃತಿಗೆ ವಿರುದ್ಧ’ ಎಂದು ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಹುಡುಗಿಯರು ರಾತ್ರಿ ಹೊತ್ತು ಹೊರಗೆ ಓಡಾಡ ಬಯಸಿದ್ದಲ್ಲಿ ಬೇರೆ ಯಾವ ದೇಶದಲ್ಲಿ ಬೇಕಾದರೂ ಆಗಬಹುದು ಆದರೆ, ಭಾರತದಲ್ಲಿ ಸಾಧ್ಯವಿಲ್ಲ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ’ ಎಂದು ಅವರು ಹೇಳಿದ್ದರು.

‘ಆಧುನೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಪಾಶ್ಚಾತೀಕರಣವನ್ನು ನಾನು ವಿರೋಧಿಸುತ್ತೇನೆ. ಆದರೆ, ವಿದೇಶಿ ಸಂಸ್ಕೃತಿಯಲ್ಲಿ ಉತ್ತಮ ಅಂಶಗಳಿದ್ದರೆ ಅದನ್ನು ಸ್ವಾಗತಿಸುತ್ತೇನೆ. ಅಂಧಾನುಕರಣೆ ಮಾಡುವುದಿಲ್ಲ’ ಎಂದೂ ಅವರು ಹೇಳಿದ್ದರು.

ತಿರುಚಲಾಗಿದೆ:‘ನಮ್ಮ  ಸಂಸ್ಕೃತಿಯೇ ನಮ್ಮ ಹೆಗ್ಗುರುತು. ನಾವದನ್ನು ಪಾಲಿಸಬೇಕು’ ಎಂದಷ್ಟೇ ನಾನು ಹೇಳಿದ್ದೆ. ಆದರೆ, ವಾಹಿನಿ ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದೆ ಎಂದು ಮಹೇಶ್‌ ಶರ್ಮಾ  ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT