ನವದೆಹಲಿ (ಪಿಟಿಐ): ವನ್ಯಜೀವಿ ಮತ್ತು ಹುಲಿ ಪ್ರೇಮಿಗಳ ಸಂತಸಕ್ಕೆ ಕಾರಣವಾಗುವ ಸಂಗತಿಯೊಂದು ಇದೀಗ ಹೊರ ಬಿದ್ದಿದೆ. ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ವಿಶ್ವದ ಹುಲಿಗಳ ಪೈಕಿ ಶೇ 70 ರಷ್ಟು ಭಾರತದಲ್ಲಿವೆ. ವಿಶೇಷ ಎಂದರೆ ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಕರ್ನಾಟಕ. 2014ರ ಗಣತಿ ಪ್ರಕಾರ ದೇಶದಲ್ಲಿನ ಹುಲಿಗಳ ಸಂಖ್ಯೆ 2,226. ಈ ಹಿಂದೆ 2010ರಲ್ಲಿ ನಡೆಸಿದ ಗಣತಿಯಲ್ಲಿ 1,706 ಹುಲಿಗಳು ಪತ್ತೆಯಾಗಿದ್ದವು. ಅಂದರೆ ಇದು ಶೇ 30 ರಷ್ಟು ಹೆಚ್ಚಳ.
2014ರಲ್ಲಿ ದೇಶದಾದ್ಯಂತ ನಡೆಸಲಾದ ಗಣತಿ ವರದಿಯನ್ನು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಬಿಡುಗಡೆ ಮಾಡಿದರು. ರಾಷ್ಟ್ರಪ್ರಾಣಿಯ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಅವರು ‘ಯಶಸ್ಸಿನ ಕಥೆ’ ಎಂದು ಬಣ್ಣಿಸಿದರು. ಇದೇ ವೇಳೆ ವಿಶ್ವದಾದ್ಯಂತ ಹುಲಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವ ಅಂಶವನ್ನೂ ಗಮನಕ್ಕೆ ತಂದರು.
2006ರಲ್ಲಿ 1,411ರಷ್ಟಿದ್ದ ಹುಲಿಗಳ ಸಂಖ್ಯೆ 2010ರಲ್ಲಿ 1,706ಕ್ಕೆ ಏರಿತ್ತು. 18 ರಾಜ್ಯಗಳ 3.78 ಲಕ್ಷ ಚದರ ಕಿ.ಮೀ.ಗಳಲ್ಲಿ ಹುಲಿಗಣತಿ ನಡೆಸಲಾಗಿದೆ. ಒಟ್ಟು 1,540 ಹುಲಿಗಳ ವಿಶೇಷ ಚಿತ್ರಗಳನ್ನು ತೆಗೆಯಲಾಗಿದೆ. ಭಾರತದ ಶೇ 80 ರಷ್ಟು ಹುಲಿಗಳ ಚಿತ್ರಗಳನ್ನು ತೆಗೆಯಲಾಗಿದೆ. ಇದಕ್ಕಾಗಿ 9,735 ಕ್ಯಾಮೆರಾಗಳನ್ನು ಬಳಸಲಾಗಿದೆ. ವಿಶ್ವದ ಯಾವುದೇ ದೇಶದಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳನ್ನು ಸೆರೆಹಿಡಿಯಲಾಗಿಲ್ಲ ಎಂದು ಸಚಿವರು ವಿವರಿಸಿದರು.
‘ಏರಿಕೆ ಕಾರಣವೇನು?’
ಬೇಟೆ ನಿಯಂತ್ರಣ, ಮಾನವ –ಪ್ರಾಣಿ ಸಂಘರ್ಷ ಕಡಿಮೆಯಾಗಿರುವುದರಿಂದ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು -ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
‘ಹುಲಿಮರಿಗಳನ್ನು ಇತರ ದೇಶಗಳಿಗೆ ನೀಡಲು ಭಾರತ ಇಚ್ಛೆ ಹೊಂದಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಯನ್ನು ಸಂರಕ್ಷಿಸುವ ಯತ್ನದಲ್ಲಿ ಭಾರತವೂ ಮಹತ್ವದ ಪಾತ್ರ ವಹಿಸಲಿದೆ’ ಎಂದು ಜಾವಡೇಕರ್ ಹೇಳಿದರು. ವನ್ಯಜೀವಿ ಪಾಲಕರು ಮತ್ತು ಹುಲಿ ಅಭಯಾರಣ್ಯಗಳ ಕ್ಷೇತ್ರ ನಿರ್ದೇಶಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಶ್ಚಿಮ ಘಟ್ಟ: ವಿಶ್ವದ ಹುಲಿ ಕೇಂದ್ರ
ಜೀವ ವೈವಿಧ್ಯ ಸಮೃದ್ಧ ಪಶ್ಚಿಮ ಘಟ್ಟ ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದನ್ನು ಈ ಗಣತಿ ದೃಢಪಡಿಸಿದೆ.
ಮುದುಮಲೈ, ಬಂಡೀಪುರ, ನಾಗರಹೊಳೆ, ವಯನಾಡು, ಗೋವಾ ಸೇರಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವಿಶ್ವದಲ್ಲೇ ಅತ್ಯಧಿಕ ಹುಲಿಗಳು ಪತ್ತೆಯಾಗಿವೆ. 2014 ರ ಗಣತಿ ಪ್ರಕಾರ ಇಲ್ಲಿ 776 ಹುಲಿಗಳಿವೆ.
ಇದರಲ್ಲಿ ಕರ್ನಾಟಕ ಭಾಗದಲ್ಲಿ 406, ಕೇರಳದಲ್ಲಿ 136 ಮತ್ತು ತಮಿಳುನಾಡಿನಲ್ಲಿ 229 ಹುಲಿಗಳಿವೆ. ಕಳೆದ ಬಾರಿಯ ಗಣತಿಯಲ್ಲಿ ಗೋವಾದಲ್ಲಿ ಒಂದೂ ಹುಲಿ ಸಿಕ್ಕಿರಲಿಲ್ಲ. ಈ ಬಾರಿ 5 ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.