ADVERTISEMENT

​ತಿರುಮಲೇಶ್‌ಗೆ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2015, 19:44 IST
Last Updated 17 ಡಿಸೆಂಬರ್ 2015, 19:44 IST

ಬೆಂಗಳೂರು: ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್‌ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2015ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತಿರುಮಲೇಶ್‌ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು,  ₹1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಪುರಸ್ಕಾರ ಒಳಗೊಂಡಿದೆ.

‘ಅಕ್ಷಯ ಕಾವ್ಯ’ ತಿರುಮಲೇಶ್‌ ಅವರ ಮಹತ್ವಾಕಾಂಕ್ಷೆಯ ಕೃತಿಯಾಗಿದ್ದು, ಇದು ‘ಆಧುನಿಕ ಮಹಾಕಾವ್ಯ’ದ ವಿಸ್ತಾರವನ್ನು ಒಳಗೊಂಡಿದೆ. ಲೋಕದ ಅನುಭವಗಳನ್ನು ಗಂಡು ಹೆಣ್ಣಿನ ರೂಪಕಗಳ ಮೂಲಕ ಗ್ರಹಿಸುವ ಪ್ರಯತ್ನ ಹಾಗೂ ಬೇರೆ ಬೇರೆ ಲಯಗಳು ಬಳಕೆಯಾಗಿರುವ ವಿಶಿಷ್ಟ ಕಾವ್ಯ ಪ್ರಯೋಗ ಇದಾಗಿದೆ.

ಹೈದರಾಬಾದ್‌ನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ಹಾಗೂ ಯೆಮನ್‌ ದೇಶದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ತಿರುಮಲೇಶ್‌ ಅವರು ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ವಿಮರ್ಶೆ, ಅಂಕಣ, ಅನುವಾದ ಬರಹಗಳ ಮೂಲಕ ಪ್ರಸಿದ್ಧರಾಗಿರುವ ತಿರುಮಲೇಶ್‌ರ ಕವಿಯಾಗಿ ಹೆಚ್ಚು ಪ್ರಸಿದ್ಧರು. ‘ಅವಧ’, ‘ವಠಾರ’, ‘ಮುಖವಾಡಗಳು’, ‘ಅಕ್ಷಯ ಕಾವ್ಯ’ ಅವರ  ಕಾವ್ಯಗಳು.

ಪ್ರೀತಿಯ ಕೃತಿಗೆ ಸಂದ ಪ್ರಶಸ್ತಿ: ‘ಇದು ಕೃತಿಕಾರನಿಗೆ ಸಂದ ಗೌರವ ಎನ್ನುವುದಕ್ಕಿಂತಲೂ ಕೃತಿಗೆ ಸಂದ ಮನ್ನಣೆ’ ಎಂದು ತಮಗೆ ಸಂದ ಪ್ರಶಸ್ತಿಯ ಬಗ್ಗೆ ತಿರುಮಲೇಶ್‌ ಪ್ರತಿಕ್ರಿಯಿಸಿದ್ದಾರೆ. ‘ಅಕ್ಷಯ ಕಾವ್ಯ ನಾನು ಬಹುವಾಗಿ ಪ್ರೀತಿಸುವ ಕೃತಿ. ಪ್ರೀತಿಪಾತ್ರ ಕೃತಿಗೆ ಪ್ರಶಸ್ತಿ ಬಂದಿರುವುದರಿಂದ ಸಹಜವಾಗಿಯೇ ಸಂತೋಷವಾಗಿದೆ. ಪ್ರಶಸ್ತಿ  ನೆಪದಲ್ಲಿ ಈ ಕೃತಿಯನ್ನು ಮತ್ತಷ್ಟು ಓದುಗರು ಗಮನಿಸುವಂತಾಗಲಿ ಎನ್ನುವ ಆಶಯ ನನ್ನದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.