ಪಣಜಿ (ಪಿಟಿಐ): ಕೊಲಂಬಿಯಾದ ಗಟ್ಟಿ ಕತೆ ಹೊಂದಿರುವ ‘ಎಂಬ್ರೇಸ್ ಅಫ್ ಸರ್ಪೆಂಟ್’ ಸಿನಿಮಾಕ್ಕೆ ಗೋವಾದಲ್ಲಿ ಸೋಮವಾರ ಮುಕ್ತಾಯವಾದ 46ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಗೋಲ್ಡನ್ ಪಿಕಾಕ್ ಪ್ರಶಸ್ತಿ‘ ನೀಡಲಾಯಿತು. ಈ ಚಿತ್ರವನ್ನು ಸಿರೊ ಗುರ್ರಾ ನಿರ್ದೇಶಿಸಿದ್ದರು.
ಚಿತ್ರದ ಕಲಾನಿರ್ದೇಶಕ ರಾಮ್‌ಸೆಸ್ ಬೆಂಜುಮಿಯಾ ಅವರು ನಿರ್ದೇಶಕರ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಚಿತ್ರೋತ್ಸವದ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಒಂದೇ ಚಿತ್ರದ ಹೆಸರಿತ್ತು. ಬೆಂಗಾಲಿ ನಿರ್ದೇಶಕ ಕೌಶಿಕ್ ಗಂಗೂಲಿ ಅವರ ‘ಸಿನಿಮಾ ವಾಲ’ ಚಿತ್ರಕ್ಕೆ ‘ಐಸಿಎಫ್‌ಟಿ– ಯುನೆಸ್ಕೊ ಫೆಲಿನಿ’ ಪ್ರಶಸ್ತಿ ನೀಡಲಾಯಿತು. ಪಶ್ಚಿಮ ಬಂಗಾಳದಲ್ಲಿನ ಚಿತ್ರಮಂದಿರಗಳ ದುಃಸ್ಥಿತಿಯ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಿದೆ.
ಉತ್ತಮ ನಿರ್ದೇಶಕ: ‘ಐಸೆನ್‌ಸ್ಟೈನ್ ಇನ್ ಗುವಾನಜುವಾಟೊ’ ಸಿನಿಮಾ ನಿರ್ದೇಶನಕ್ಕ ರಷ್ಯಾದ ಪೀಟರ್ ಗ್ರೀನ್ ವೇ ಅವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಯಿತು.
ಇತರ ಪ್ರಶಸ್ತಿಗಳು: ರಷ್ಯಾದ ಚಿತ್ರ ನಿರ್ಮಾಪಕ ನಿಕಿಟಾ ಮಿಖಾಲೋವ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರಿಗೆ ‘ದಿ ಮೇಸರ್ ಆಫ್‌ದಿ ಮ್ಯಾನ್’ ಚಿತ್ರದಲ್ಲಿನ ನಟನೆಗೆ ಉತ್ತಮ ನಟ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉತ್ತಮ ನಟಿ ಪ್ರಶಸ್ತಿಯನ್ನು ಟರ್ಕಿಯ ‘ಮುಸ್ತಾಂಗ್’ ಚಿತ್ರದಲ್ಲಿನ ಐವರು ಹಂಚಿಕೊಂಡರು.
‘ಚಲನಚಿತ್ರೋತ್ಸವ ವಿಶ್ವದ ವಿವಿಧ ದೇಶಗಳ ಆಲೋಚನೆ, ಕಥೆಗಳನ್ನು ಒಂದುಗೂಡಿಸಲು ನೆರವಾಗಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದರು. ಸಮಾರಂಭದ ಮುಖ್ಯ ಅತಿಥಿ ಯಾಗಿದ್ದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮಾತನಾಡಿ, ವಿಶ್ವದ ವಿವಿಧ ಸಂಸ್ಕೃತಿಯನ್ನು ಒಂದು ಗೂಡಿಸುವಲ್ಲಿ ಚಲನಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್, ರಾಜ್ಯಪಾಲೆ ಮೃದುಲಾ ಸಿನ್ಹಾ ಹಾಜರಿದ್ದರು. ಖ್ಯಾತ ಮರಳುಶಿಲ್ಪಿ ರಾಹುಲ್ ಆರ್ಯ ಅವರು ವಿವಿಧ ಮರಳು ಶಿಲ್ಪಗಳನ್ನು ರಚಿಸಿ ಗಮನಸೆಳೆದರು. ಶಿಲ್ಲಾಂಗ್‌ನ ಕಲಾವಿದರು ಭಾರತೀಯ ಸಿನಿಮಾದ ವಿವಿಧ ಕಥೆಗಳನ್ನು ಪ್ರಸ್ತುತ ಪಡಿಸಿದರು. ಸರ್ಬಿಯಾದ ನಿರ್ದೇಶಕ ಗೋರನ್ ರಾಡೊವಾನೊವಿಕ್ಸ್‌್ ಅವರ ‘ಎನ್‌ಕ್ಲೇವ್’ ಚಿತ್ರಕ್ಕೆ ವಿಶೇಷ ಪ್ರಶಸ್ತಿ ನೀಡಲಾಯಿತು. ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಜೂಲಿಯಾಸ್ ವರ್ಗಾಸ್ ನಿರ್ದೇಶನದ ‘ಸೀಲ್ಡ್ ಕಾರ್ಗೊ’ ಚಿತ್ರಕ್ಕೆ ಕೊಡ ಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.