ನ್ಯೂಯಾರ್ಕ್ (ಪಿಟಿಐ): ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರದ ನಿರೀಕ್ಷೆಗಳು ‘ಬಹುಶಃ ಅವಾಸ್ತವಿಕ’ ಎಂದೆನಿಸಿದ್ದವು. ಆದರೆ, ಸರ್ಕಾರ ಹೂಡಿಕೆಯ ವಾತಾವರಣ ಸೃಷ್ಟಿಸಲು ಕ್ರಮಕೈಗೊಂಡಿದೆ. ಜತೆಗೆ ಹೂಡಿಕೆದಾರರ ಕಳವಳಗಳಿಗೆ ‘ಕಿವಿ’ ನೀಡಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
‘ಹೊಸ ಸರ್ಕಾರವು ಭಾರಿ ನಿರೀಕ್ಷೆಗಳನ್ನು ಹೊಂದಿತ್ತು. ಯಾವುದೇ ಸರ್ಕಾರಕ್ಕೆ ಆ ಮಟ್ಟಿಗಿನ ನಿರೀಕ್ಷೆಗಳು ಪೂರೈಸಲು ಸಾಧ್ಯವಿಲ್ಲ ಎಂದು ನನಗನಿಸಿತ್ತು’ ಎಂದು 'ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್' ಉದ್ದೇಶಿಸಿ ಮಾತನಾಡಿದ ಬಳಿಕ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.
ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೇಗೆ ಭಾವಿಸಿದ್ದರು ಎಂದರೆ, ಮಾರುಕಟ್ಟೆ ವಿರೋಧಿ ಶಕ್ತಿಗಳ ಸಂಹಾರಕ್ಕೆ ‘ಬಿಳಿ ಕುದುರೆ ಸವಾರಿ ಮಾಡಿ ಬರುವ ರೊನಾಲ್ಡ್ ರೇಗನ್’ ಅವರಂತೆ ಮನಸ್ಸಿನಲ್ಲಿ ಚಿತ್ರಿಸಿಕೊಂಡಿದ್ದರು. ಅಂಥ ಹೋಲಿಕೆ ‘ಪ್ರಾಯಶಃ ಸಮಂಜಸವಲ್ಲ’ ಎಂದು ನುಡಿದಿದ್ದಾರೆ.
ಇದೇ ವೇಳೆ, ‘ಕೇಂದ್ರ ಸರ್ಕಾರವು ಹೂಡಿಕೆ ವಾತಾವರಣ ನಿರ್ಮಿಸಲು ಕ್ರಮಗಳನ್ನು ಕೈಗೊಂಡಿದೆ. ಅದು ನನಗೆ ಮುಖ್ಯ ಎನಿಸುತ್ತದೆ. ಜತೆಗೆ ಸರ್ಕಾರವು ಹೂಡಿಕೆದಾರರ ಆತಂಕಗಳಿಗೆ ಸ್ಪಂದಿಸುತ್ತಿದೆ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.