ಮುಂಬೈ/ಚಂಡೀಗಡ (ಪಿಟಿಐ): ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದ್ದರೆ, ಕಾಂಗ್ರೆಸ್ ಸೋತು ನೆಲಕಚ್ಚಿದೆ. ಹರಿಯಾಣದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸ್ಪಷ್ಟ ಜನಾದೇಶ ಸಿಕ್ಕಿದ್ದರೆ, ಮಹಾರಾಷ್ಟ್ರದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚನೆಯ ಹೊಸ್ತಿಲಲ್ಲಿ ನಿಂತಿದೆ.
ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಬಿಜೆಪಿ 122 ಸ್ಥಾನಗಳನ್ನು ಗೆದ್ದಿದ್ದರೆ, ಶಿವಸೇನಾ 63, ಕಾಂಗ್ರೆಸ್ 42, ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಗೆದ್ದಿವೆ. ಹರಿಯಾಣದ 90 ಕ್ಷೇತ್ರಗಳ ಪೈಕಿ ಬಿಜೆಪಿ 47, ಐಎನ್‌ಎಲ್‌ಡಿ 19, ಕಾಂಗ್ರೆಸ್ 15 ಕಡೆ ವಿಜಯಿಯಾಗಿವೆ.
ಮಹಾರಾಷ್ಟ್ರದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ. ಆದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಅದು ಯಾವ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಭಾನುವಾರ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ‘ಬಿಜೆಪಿ ಸರ್ಕಾರ ರಚಿಸುವುದಾದರೆ ಬೇಷರತ್ ಬಾಹ್ಯ ಬೆಂಬಲ ನೀಡಲು ಸಿದ್ಧ’ ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ನಿರೀಕ್ಷೆಯಂತೆ ಎರಡೂ ರಾಜ್ಯಗಳಲ್ಲಿ ‘ಮೋದಿ ಅಲೆ’ಗೆ ಸಿಕ್ಕ ಕಾಂಗ್ರೆಸ್ ಸೂತ್ರ ಕಿತ್ತ ಪಟವಾಗಿದೆ. ಹರಿಯಾಣದಲ್ಲಿ ಸರಳ ಬಹುಮತ ಪಡೆದಿರುವ ಬಿಜೆಪಿ ಸರ್ಕಾರ ರಚಿಸುವ ಬಗ್ಗೆ ಯಾವುದೇ ಗೊಂದಲ ಉಳಿದಿಲ್ಲ.
ಆದರೆ, ಮಹಾರಾಷ್ಟ್ರದಲ್ಲಿ ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿ ತನ್ನ ಮಿತ್ರಪಕ್ಷವನ್ನು ಆಯ್ಕೆ
ಮಾಡಿಕೊಳ್ಳಬೇಕಿದೆ. ಸರಳ ಬಹುಮತಕ್ಕೆ ಕೊರತೆಯಾಗಿರುವ 22 ಸದಸ್ಯರ ಬೆಂಬಲ ಹೊಂದಾಣಿಕೆಗೆ ಬಿಜೆಪಿ ಪಾಳಯದಲ್ಲಿ ಈಗಾಗಲೇ ಚಟುವಟಿಕೆಗಳು ಗರಿಗೆದರಿವೆ.
ಎನ್‌ಸಿಪಿ ಆಹ್ವಾನ ತಿರಸ್ಕರಿಸದ ಬಿಜೆಪಿ:ಬಾಹ್ಯ ಬೆಂಬಲ ನೀಡಲು ಸಿದ್ಧ ಎಂದಿರುವ ಎನ್‌ಸಿಪಿಯ ಆಹ್ವಾನವನ್ನು ಬಿಜೆಪಿ ಸ್ಪಷ್ಟವಾಗಿ ತಿರಸ್ಕರಿಸಿಲ್ಲ. ಎನ್‌ಸಿಪಿ ಪ್ರಸ್ತಾವವನ್ನು ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಪರಾಮರ್ಶಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನವದೆಹಲಿಯಲ್ಲಿ ಹೇಳಿದ್ದಾರೆ.
ಈ ಮೂಲಕ ಅವರು ಎನ್‌ಸಿಪಿ ಬೆಂಬಲ ಪಡೆದು ಸರ್ಕಾರ ರಚಿಸುವ ಸಾಧ್ಯತೆಯನ್ನೂ ಜೀವಂತವಾಗಿ ಇಟ್ಟಿದ್ದಾರೆ. ಮತ್ತೊಂದೆಡೆ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು, ಬಿಜೆಪಿ ತನ್ನ ಹಳೆಯ ಮಿತ್ರ ಪಕ್ಷವಾದ ಶಿವಸೇನಾ ಜತೆ ಸೇರಿ ಸರ್ಕಾರ ರಚಿಸುವ ಸೂಕ್ತ ಎಂದು ಸಲಹೆ ನೀಡಿದ್ದಾರೆ.
61 ಕ್ಷೇತ್ರಗಳಲ್ಲಿ ಜಯಗಳಿಸಿರುವ ಶಿವಸೇನಾ ನಡೆ ಏನು ಎಂದು ಇನ್ನೂ ಸ್ಪಷ್ಟವಾಗಿಲ್ಲ. ‘ನಾನು ನಿರಮ್ಮಳನಾಗಿ ಮನೆಯಲ್ಲಿ ಕೂತಿದ್ದೇನೆ. ಸರ್ಕಾರ ರಚಿಸಲು ನಮ್ಮ ಬೆಂಬಲ ಬೇಕಾದವರು ಬಂದು ಕೋರಿದ ನಂತರ ಆ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.
15 ವರ್ಷ ಕಾಲ ಮಹಾರಾಷ್ಟ್ರ ಹಾಗೂ 10 ವರ್ಷ ಕಾಲ ಹರಿಯಾಣದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಜತೆಗೆ ಮೋದಿ ಅಲೆಯೂ ಸೇರಿ ಕೊಚ್ಚಿ ಹೋಗಿದೆ.ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ಮರುಕಳಿಸಿದ್ದು ಕಾಂಗ್ರೆಸ್ ಸಾಧನೆ ಕಾರ್ಯಕರ್ತರಲ್ಲಿ ಭಾರಿ ನಿರಾಸೆ ಮೂಡಿಸಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಕ್ಷ ಸಂಘಟನೆಗೆ ಕರೆ ತರುವ ಕೂಗು ಕಾರ್ಯಕರ್ತರ ವಲಯದಲ್ಲಿ ಮತ್ತೊಮ್ಮೆ ಮಾರ್ದನಿಸಿದೆ.
ಈ ಚುನಾವಣೆಗಳು ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವನ್ನು ಒರೆಗೆ ಹಚ್ಚಲಿರುವ ಚುನಾವಣೆಗಳು ಎಂದೇ ಬಿಂಬಿತವಾಗಿದ್ದವು. ಇದನ್ನು ಸವಾಲಾಗಿಯೇ ಸ್ವೀಕರಿಸಿದ್ದ ಮೋದಿ ಅವರು ಮಹಾರಾಷ್ಟ್ರದಲ್ಲಿ 27 ಹಾಗೂ ಹರಿಯಾಣದಲ್ಲಿ 11 ಚುನಾವಣಾ ಯಾಲಿಗಳನ್ನು ನಡೆಸಿ ಜನಬೆಂಬಲ ಪಡೆಯುವ ಯತ್ನ ನಡೆಸಿದ್ದರು.
**
ಚಾರಿತ್ರಿಕ ಫಲಿತಾಂಶ
ಐತಿಹಾಸಿಕ ಫಲಿತಾಂಶ! ಇದು ಬಿಜೆಪಿಗೆ ಅತ್ಯಂತ ಹೆಮ್ಮೆ ಹಾಗೂ ಖುಷಿಯ ವಿಷಯ.
– ನರೇಂದ್ರ ಮೋದಿ, ಪ್ರಧಾನಿ
**
ಬದಲಾವಣೆಗೆ ಮತ
ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಜನ ಬದಲಾವಣೆಗೆ ಮತ ಹಾಕಿದ್ದಾರೆ. ನಾವು ಜನಾದೇಶ ಒಪ್ಪಿಕೊಂಡು ಈ ರಾಜ್ಯಗಳಲ್ಲಿ ರಚನಾತ್ಮಕವಾಗಿ ಹಾಗೂ ಜಾಕರೂಕತೆಯಿಂದ ಕೆಲಸ ಮಾಡುತ್ತೇವೆ.
–ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ
**
ಸುನಾಮಿ ಅಲೆ
ಮೋದಿ ಅವರು ಪ್ರಶ್ನಾತೀತ ನಾಯಕ ಎನ್ನುವುದು ಸಾಬೀತಾಗಿದೆ. ಮೋದಿ ಅಲೆ ಸುನಾಮಿಯಂತೆ ಬೃಹದಾಕಾರ ತಾಳಲಿದೆ
– ಅಮಿತ್ ಷಾ, ಬಿಜೆಪಿ ಅಧ್ಯಕ್ಷ
**
ಮುಂದುವರಿದ ಬೆಂಬಲ
ಲೋಕಸಭೆ ಚುನಾವಣೆಯಲ್ಲಿ ವ್ಯಕ್ತವಾದ ಜನ ಬೆಂಬಲ ವಿಧಾನಸಭೆ ಚುನಾವಣೆಗಳಲ್ಲಿಯೂ ಮುಂದುವರಿದಿದೆ.
– ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.