ಕನೋಜ್/ಹರ್ದೋಯಿ/ಸೀತಾಪುರ್: ‘ಎಸ್‌ಪಿ ಮತ್ತು ಬಿಎಸ್‌ಪಿಗಳು ಜಾತಿ ರಾಜಕಾರಣ ಮಾಡುತ್ತಿವೆ. ಅಧಿಕಾರಕ್ಕೆ ಬಂದರೆ ಜನರ ಸಂಪತ್ತು ಕೊಳ್ಳೆ ಹೊಡೆಯಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.
‘ಮಾಯಾವತಿಜೀ, ನಾನು ತೀರಾ ಹಿಂದುಳಿದವ. ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆದುತರಬೇಡಿ ಎಂದು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ನೀವು ನನ್ನ ಜಾತಿಯ ವಿಚಾರ ಮಾತನಾಡುವವರೆಗೂ, ದೇಶದ ಜನರಿಗೆ ನನ್ನ ಜಾತಿಯ ಬಗ್ಗೆ ಗೊತ್ತಿರಲಿಲ್ಲ. ಇದಕ್ಕಾಗಿ ನಿಮಗೆ ಧನ್ಯವಾದಗಳು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಇದು ಅವಕಾಶವಾದಿಗಳ ಮಹಾಕಲಬೆರಕೆ. ಸಮಾಜವಾದಿ ಪಕ್ಷವು ಅಂಬೇಡ್ಕರ್ ವಿಚಾರಗಳ ವಿರೋಧಿ. ಆದರೆ ತಮ್ಮನ್ನು ತಾವು ದಲಿತರು ಎಂದು ಕರೆದುಕೊಳ್ಳುವ ಮಾಯಾವತಿ ಅವರು ಸಮಾಜವಾದಿಗಳ ಜತೆ ಕೈ ಜೋಡಿಸಿದ್ದಾರೆ. ಇವರ ಬಾಯಲ್ಲಿ ಬರೀ ಜಾತಿಯ ಮಂತ್ರ, ಮನಸಲ್ಲಿ ಹಣದ ಜಪ’ ಎಂದು ಮೋದಿ ಕಿಡಿಕಾರಿದ್ದಾರೆ.
‘ಕೆಲವು ಜನರು ಅಂಬೇಡ್ಕರ್ ಹೆಸರಿನಲ್ಲಿ ಮತ ಕೇಳುತ್ತಾರೆ. ಆದರೆ ಅಂಬೇಡ್ಕರ್ ಅವರಿಂದ ಅವರು ಏನನ್ನೂ ಕಲಿತಿಲ್ಲ. ಅಧಿಕಾರ ಹಿಡಿಯುವುದೇ ಗುರಿಯಾದಾಗ ಹೀಗಾಗುತ್ತದೆ. ದೇಶಕ್ಕಿಂತಜಾತಿ ರಾಜಕಾರಣವೇ ಮುಖ್ಯವಾದಾಗ ಹೀಗಾಗುತ್ತದೆ. ಈ ‘ಅವಕಾಶವಾದಿ ದುರ್ಬಲರು’ ಸೇರಿ ಮಾಡುವ ಸರ್ಕಾರವೂ ದುರ್ಬಲವಾಗಿಯೇ ಇರಲಿದೆ’ ಎಂದು ಅವರುಹರಿಹಾಯ್ದಿದ್ದಾರೆ.
‘ದೇಶಕ್ಕೆ ದುರ್ಬಲ ಸರ್ಕಾರ ಬೇಕೇ ಅಥವಾ ಸದೃಢ ಸರ್ಕಾರ ಬೇಕೇ ಎಂಬುದನ್ನು ನೀವೇ (ಮತದಾರರೇ) ನಿರ್ಧರಿಸಬೇಕು. ನೀವೆಲ್ಲರೂ ಈ ಚೌಕಿದಾರನಿಗೆ ಮತ ಹಾಕಬೇಕು’ ಎಂದು ಅವರು ಕರೆ ನಿಡಿದರು.
ಮೋದಿ–ಶಾ ವಿರುದ್ಧ ಕ್ರಮಕ್ಕೆ ವಿಳಂಬ: ಕಾಂಗ್ರೆಸ್ ಆರೋಪ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಮಿತ್ ಶಾ ವಿರುದ್ಧ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಚುನಾವಣೆ ಘೋಷಣೆಯಾದ ಬಳಿಕ ಮೋದಿ ಹಾಗೂ ಶಾ ಅವರು ಒಟ್ಟು 37 ಬಾರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಪಟ್ಟಿ ನೀಡಿದೆ. ಮತಗಳನ್ನು ಧ್ರುವೀಕರಿಸುವಂತಹ ಮಾತುಗಳು, ಸೇನೆ ಹೆಸರಲ್ಲಿ ಮತಯಾಚನೆ, ಮತದಾನ ಮಾಡಿದ ಬಳಿಕ ರೋಡ್
ಷೋ ಮೊದಲಾದ ಪ್ರಕರಣಗಳು ಇದರಲ್ಲಿ ಸೇರಿವೆ.
‘ಮಾದರಿ ನೀತಿ ಸಂಹಿತೆ’ ಇದೀಗ ‘ಮೋದಿನೀತಿ ಸಂಹಿತೆ’ ಆಗಿದೆ ಎಂದು ಕಾಂಗ್ರೆಸ್ ವಕ್ತಾರಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ. ಇಂತಹಘಟನೆಗಳ ಬಗ್ಗೆ ಆಯೋಗಕ್ಕೆ ಕುರುಡುಗಣ್ಣೇಕೆ ಎಂದು ಪ್ರಶ್ನಿಸಿದೆ.
ಚುನಾವಣಾ ವೆಚ್ಚ: ಮೋದಿ ವಿರುದ್ಧ ದೂರು
ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ರೋಡ್ ಷೋ ನಡೆಸಲು ₹70 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುವ ಮೂಲಕ ಚುನಾವಣಾ ವೆಚ್ಚ ನಿಯಮ ಉಲ್ಲಂಘಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಮೋದಿ ವಿರುದ್ಧ ಸಂಜಯ್ ಸಿಂಗ್ ಅವರು ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ನೀಡಿದ್ದಾರೆ.ಗುರುವಾರ ನಡೆದ ರೋಡ್ ಷೋಗೆ ₹1.27 ಕೋಟಿ ಖರ್ಚು ಮಾಡಿಲಾಗಿದೆ ಎಂದಿರುವ ಅವರು, ಯಾವುದಕ್ಕೆಲ್ಲಾ ಎಷ್ಟು ಹಣ ವಿನಿಯೋಗಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಬಿಜೆಪಿ ನಾಯಕರು ವಿಮಾನಗಳಲ್ಲಿ ವಾರಾಣಸಿಗೆ ಆಗಮಿಸಲು ₹64 ಲಕ್ಷ, ಕಾರ್ಯಕರ್ತರನ್ನು ಕರೆತರಲು ₹20 ಲಕ್ಷ, ಹೋಟೆಲ್ ವೆಚ್ಚ ₹8 ಲಕ್ಷ, ವಾಹನಗಳ ನಿರ್ವಹಣೆಗೆ ₹6 ಲಕ್ಷ, ಆಹಾರ ಹಾಗೂ ಚುನಾವಣಾ ಸಲಕರಣೆಗೆ ತಲಾ ₹5 ಲಕ್ಷ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ₹2 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಅವರು ದೂರು ನೀಡಿದ್ದಾರೆ. ಮೋದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
**
ಈಡೇರಿಸಲು ಸಾಧ್ಯವಿಲ್ಲದಂತಹ ಭರವಸೆಗಳನ್ನು ನಾವು ನೀಡುವುದಿಲ್ಲ. ಆದರೆ ಇವರು (ವಿಪಕ್ಷಗಳು) ಆಲೂಗಡ್ಡೆಯಿಂದ ಚಿನ್ನ ಮಾಡುತ್ತಾರಂತೆ
– ನರೇಂದ್ರ ಮೋದಿ, ಪ್ರಧಾನಿ
**
ಮೋದಿ ಮತ್ತು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶವನ್ನು ನಾಶ ಮಾಡುತ್ತಾರೆ. ಇವರು 440 ವೋಲ್ಟ್ಸ್‌ನ ವಿದ್ಯುತ್‌ಗಿಂತಲೂ ಅಪಾಯಕಾರಿ
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.