ಜುನಾಗಡ: ಎನ್‍ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆಭ್ರಷ್ಟರನ್ನು ಜೈಲಿಗೆ ಹಾಕುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಬುಧವಾರ ಗುಜರಾತಿನ ಜುನಾಗಡದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಐದು ವರ್ಷಗಳಲ್ಲಿ ನಾನು ಭ್ರಷ್ಟರನ್ನು ಜೈಲಿನ ಬಾಗಿಲುವರೆಗೆ ಕರೆ ತಂದಿದ್ದೇನೆ. ಇನ್ನು ಐದು ವರ್ಷ ಕೊಟ್ಟರೆ ನಾನು ಅವರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದಾರೆ.
ಎಂದಿನಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಗರಣಗಳ ವಿಷಯದಲ್ಲಿ ಕಾಂಗ್ರೆಸ್ ಹೆಸರು ಹಲವಾರು ಬಾರಿ ಕೇಳಿಬಂದಿದೆ.ಇದೀಗ ಅದಕ್ಕೆ ಮತ್ತೊಂದು ಹೊಸ ಹೆಸರು ಸಿಕ್ಕಿದೆ, ಅದಕ್ಕೆ ಸಾಕ್ಷ್ಯವೂ ಇದೆ.ಕಾಂಗ್ರೆಸ್ ತುಘ್ಲಕ್ರೋಡ್ ಚುನಾವೀ ಘೊಟಾಲಾ ( ಚುನಾವಣಾ ಹಗರಣ)ದಲ್ಲಿ ಭಾಗಿಯಾಗಿದೆ.ಅಲ್ಲಿ ಬಡವರಿಗೆ ಮೀಸಲಿಟ್ಟ ಹಣ ನಾಯಕರ ಪಾಲಾಗುತ್ತದೆ ಎಂದಿದ್ದಾರೆ. ದೆಹಲಿಯ ತುಘ್ಲಕ್ ರಸ್ತೆಯಲ್ಲಿದೆ ರಾಹುಲ್ ಗಾಂಧಿ ಮನೆ.ಅದನ್ನೇ ಮೋದಿ ಇಲ್ಲಿ ಲೇವಡಿ ಮಾಡಿದ್ದಾರೆ.
ಕರ್ನಾಟಕದ ನಂತರ ಮಧ್ಯಪ್ರದೇಶ ಈಗ ಕಾಂಗ್ರೆಸ್‍ನ ಎಟಿಎಂ ಆಗಿದೆ.ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ, ಜನರನ್ನು ಲೂಟಿ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಅಧಿಕಾರವನ್ನು ಬಯಸುತ್ತಿದೆ.
ಕಾಶ್ಮೀರದಲ್ಲಿನ ಇಂದಿನ ಪರಿಸ್ಥಿತಿಗೆ ಕಾರಣ ಕಾಂಗ್ರೆಸ್, ಮೋದಿಯನ್ನು ಕೆಳಗಿಳಿಸಿ ಎಂಬ ಒಂದೇ ಒಂದು ಹಾಡು ಕಾಂಗ್ರೆಸ್‍ನ ಟೇಪ್ ರೆಕಾರ್ಡರ್‌ನಲ್ಲಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಪೋಷಿಸಿದ್ದ ಕಾಂಗ್ರೆಸ್ ಇದೇ. ಆವಾಗ ಸರ್ದಾರ್ ಪಟೇಲ್ ಇಲ್ಲದೇ ಇದ್ದಿದ್ದರೆ, ಭಾರತಕ್ಕೆ ಕಾಶ್ಮೀರ ಸಿಗುತ್ತಿರಲಿಲ್ಲ.
ಜುನಾಗಡವನ್ನು ಭವ್ಯ ಭಾರತದ ಅಂಗವನ್ನಾಗಿ ಮಾಡಲು ಸರ್ದಾರ್ ಪಟೇಲ್ ಸಿಕ್ಕಾಪಟ್ಟೆ ಶ್ರಮ ವಹಿಸಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ದಾರ್ ಪಟೇಲ್ ಮತ್ತು ಭಾರತೀಯರ ಆಸೆಗಳನ್ನು ನಾಶ ಮಾಡಿದೆ.ಪಟೇಲ್ ಅವರ ಜತೆ ಕಾಂಗ್ರೆಸ್ ಹೇಗೆ ವರ್ತಿಸಿದೆ ಎಂಬುದನ್ನು ಇತಿಹಾಸ ಹೇಳುತ್ತದೆ.ಅವರು ನೀಡಿದ ಕೊಡುಗೆಯನ್ನು ಕಾಂಗ್ರೆಸ್ ಅಳಿಸಿ ಹಾಕಿತು.ಸರ್ದಾರ್ ಪಟೇಲ್ ಇಲ್ಲದೇ ಇರುತ್ತಿದ್ದರೆ ಜುನಾಗಡ ಇರುತ್ತಿರಲಿಲ್ಲ.ಅವರಿಲ್ಲದಿರುತ್ತಿದ್ದರೆ ಸೋಮನಾಥ ದೇವಾಲಯದ ಪರಿಸ್ಥಿತಿ ಏನಾಗುತ್ತಿತ್ತು?ಎಂದಿದ್ದಾರೆ ಮೋದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.