ತಿರುವನಂತಪುರ: ಇತ್ತೀಚೆಗೆ ಮೃತಪಟ್ಟಿರುವ ಫ್ಯೂಷನ್ ಕಲಾವಿದ ಬಾಲಭಾಸ್ಕರ್ ಅವರ ಆಪ್ತರಲ್ಲೊಬ್ಬರು ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಇದರಿಂದಾಗಿ ಬಾಲಭಾಸ್ಕರ್ ಅವರ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.
2018ರ ಸೆ.25ರಂದು ಬಾಲಭಾಸ್ಕರ್ ಅವರ ಕುಟುಂಬಪ್ರಯಾಣಿಸುತ್ತಿದ್ದ ಕಾರು ತಿರುವನಂತಪುರದ ಹೊರವಲಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಬಾಲಭಾಸ್ಕರ್ ಹಾಗೂ ಅವರ 2 ವರ್ಷದ ಪುತ್ರಿ ತೇಜಸ್ವಿನಿ ಸಾವನ್ನಪ್ಪಿದ್ದರು.
ಘಟನೆ ನಸುಕಿನಲ್ಲಿ ಸಂಭವಿಸಿದ್ದರಿಂದ, ಚಾಲಕ ಮಂಪರಿನಲ್ಲಿ ಕಾರು ಓಡಿಸಿದ್ದು ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿತ್ತು. ಬಾಲಭಾಸ್ಕರ್ ಅವರ ತಂದೆ ಸಿ.ಕೆ. ಉನ್ನಿ ಅವರು ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಮಗನ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿದ್ದರು. ಬಾಲಭಾಸ್ಕರ್ ಅವರ ಕಾರ್ಯಕ್ರಮಗಳ ಆಯೋಜನೆಯ ಹೊಣೆಯನ್ನು ಅವರ ಆಪ್ತರಾಗಿದ್ದ ವಿಷ್ಣು ಎಸ್. ಹಾಗೂ ಪ್ರಕಾಶ್ ಥಂಪಿ ಹೊತ್ತಿದ್ದರು. ಈ ಇಬ್ಬರೂ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಆರೋಪಿಗಳು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಹೇಳಿದ್ದರಿಂದ ಅಪಘಾತ ಘಟನೆಗೆ ಹೊಸ ತಿರುವು ಲಭಿಸಿದೆ. ವಿದೇಶದಿಂದ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ 25 ಕೆ.ಜಿ. ಚಿನ್ನವನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಈಚೆಗೆ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುವಾಗ ಬಾಲಭಾಸ್ಕರ್ ಅವರ ಈ ಇಬ್ಬರು ಆಪ್ತರು ದಂಧೆಯ ಹಿಂದಿರುವುದು ಬೆಳಕಿಗೆ ಬಂದಿದೆ. ಪ್ರಕಾಶ್ ಥಂಪಿ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಷ್ಣು ತಲೆಮರೆಸಿಕೊಂಡಿದ್ದಾರೆ. ಇನ್ನೊಂದೆಡೆ, ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳ ನಂತರ ಅದೇ ಮಾರ್ಗದಲ್ಲಿ ಸಂಚರಿಸಿದ್ದ ಕಲಾವಿದ ಕಲಾಭವನ್ ಶೋಭಿ ಎಂಬುವರು, ಇಬ್ಬರು ವ್ಯಕ್ತಿಗಳು ಶಂಕಾಸ್ಪದ ರೀತಿಯಲ್ಲಿ ಅಪಘಾತದ ಸ್ಥಳದಿಂದ ದೂರ ಹೋಗುತ್ತಿದ್ದುದನ್ನು ಕಂಡಿರುವುದಾಗಿ ಹೇಳಿದ್ದಾರೆ.
‘ವಿದೇಶಗಳಲ್ಲಿ ಕಾರ್ಯಕ್ರಮ ನೀಡಲು ಹೋದಾಗ, ಬಾಲಭಾಸ್ಕರ್‌ಗೆ ಗೊತ್ತಿಲ್ಲದೆಯೇ ಅವರನ್ನು ಗುರಾಣಿಯಾಗಿ ಬಳಸಿಕೊಂಡು ಅವರ ಸ್ನೇಹಿತರು ಕಳ್ಳಸಾಗಾಣಿಕೆ ಮಾಡಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.