ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ್ದ‘ಮಿಷೆಲ್ಮಾಮನ ದರ್ಬಾರ್’ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಶನಿವಾರ ಖಂಡಿಸಿದ್ದಾರೆ.
ಅಗಸ್ಟಾ ವೆಸ್ಟ್‌ಲ್ಯಾಂಡ್ ವ್ಯವಹಾರದ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್ ಹಾಗೂ ಕಾಂಗ್ರೆಸ್ ಕುರಿತು ಕಾರ್ಯಕ್ರಮವೊಂದರಲ್ಲಿ ವ್ಯಂಗ್ಯವಾಡಿದ್ದ ಮೋದಿ,‘ಇಷ್ಟು ವರ್ಷಕಾಂಗ್ರೆಸ್ ಪಕ್ಷ ಸರ್ಕಾರ ನಡೆಸಿದೆಯೋ ಅಥವಾ ಮಿಷೆಲ್ ಮಾಮನ ದರ್ಬಾರ್ ನಡೆಸಿದೆಯೋ ಗೊತ್ತಿಲ್ಲ’ ಎಂದಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ಖೇರಾ, ‘ಬಿಜೆಪಿಯ ಹಿರಿಯ ನಾಯಕರೊಬ್ಬರು ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣವನ್ನು ಕಪ್ಪುಪಟ್ಟಿಯಿಂದ ಕೈಬಿಟ್ಟಿದ್ದರು ಎಂದು ಸ್ವತಃ ಮೈಕಲ್ ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ತೆರವುಗೊಳಿಸಿದ್ದ ಬಿಜೆಪಿಯ ಆ ಹಿರಿಯ ನಾಯಕ ಯಾರು ಎಂಬುದರ ಬಗ್ಗೆ ಮೋದಿ ಅವರು ಮೊದಲು ಉತ್ತರಿಸಬೇಕು’ ಎಂದು ಆಗ್ರಹಿಸಿದರು.
ನಿರುದ್ಯೋಗ ಸಮಸ್ಯೆ ಹಾಗೂ ಮತ್ತಿತರ ವಿಚಾರಗಳತ್ತ ಯೋಜನೆ ರೂಪಿಸುವಂತೆ ಸಲಹೆ ನೀಡಿದ ಖೇರಾ, ದೇಶದ ಜನರು ಅವರನ್ನು(ಮೋದಿ) ಆಯ್ಕೆ ಮಾಡಿರುವುದು ತಮ್ಮ ನಿರೀಕ್ಷೆ ಹಾಗೂ ಕನಸುಗಳನ್ನು ಈಡೇರಿಸುವ ಸಲುವಾಗಿ. ಕನಿಷ್ಠ ಅವರಿಗಾದರೂ ಮೋದಿ ಉತ್ತರಿಸಲಿ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಆ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.
ಉದ್ಯಮಿ ವಿಜಯ್ ಮಲ್ಯ ಪ್ರಕರಣ ಕುರಿತಾಗಿಯೂ ಪ್ರಶ್ನೆ ಎಸೆದ ಖೇರಾ, ದೇಶದಿಂದ ಪಲಾಯನ ಮಾಡುವ ಕೆಲದಿನಗಳ ಮೊದಲು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನುಮಲ್ಯ ಭೇಟಿ ಮಾಡಿದ್ದರ ಬಗ್ಗೆಯೂ ಮೋದಿ ಮಾತನಾಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.