ಪಣಜಿ: ಗೋವಾದಲ್ಲಿ ಟ್ರಕ್ ಕಣಿವೆಗೆ ಬಿದ್ದು ಒಬ್ಬರು ಸಾವಿಗೀಡಾಗಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ದಕ್ಷಿಣ ಗೋವಾ ಜಿಲ್ಲೆಯ ಕ್ವಿಪೆಮ್ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ.
ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮರಳುತ್ತಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಸಮಾಜ ಕಲ್ಯಾಣ ಸಚಿವ ಸುಭಾಷ್ ಫಲ್ ದೇಸಾಯಿ ಕಾರಿನಿಂದ ಇಳಿದು ಸಂತ್ರಸ್ತರ ನೆರವಿಗೆ ಬಂದರು.
ಆಯುರ್ವೇದ ವೈದ್ಯರಾಗಿರುವ ಸಾವಂತ್ ಅವರು ಸಂತ್ರಸ್ತರ ನಾಡಿಮಿಡಿತವನ್ನು ಪರಿಶೀಲಿಸಿದರು. ಫಲ್ ದೇಸಾಯಿ ಅವರು ಕಣಿವೆಗೆ ಇಳಿದು ಅಪಘಾತಕ್ಕೀಡಾದ ವಾಹನದಲ್ಲಿ ಸಿಲುಕಿಕೊಂಡವರನ್ನು ಹೊರತೆಗೆಯಲು ಸಹಾಯ ಮಾಡಿದರು.
ಅಪಘಾತ ಸಂಭವಿಸುವ ವೇಳೆ ಗಾಯಾಳುಗಳು ಟ್ರಕ್ ಕ್ಯಾರಿಯರ್ ಮೇಲೆ ಕುಳಿತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕನ ನಿಯಂತ್ರನ ತಪ್ಪಿ ಟ್ರಕ್ ಕಣಿವೆಗೆ ಬಿದ್ದಿದೆ. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿ, ಐವರು ಮಕ್ಕಳು ಸೇರಿದಂತೆ 13 ಮಂದಿ ಪುರುಷರು ಮತ್ತು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಎಂ ಸಾವಂತ್ ಮತ್ತು ಸಚಿವ ಫಲ್ ದೇಸಾಯಿ ಅವರು ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಮತ್ತು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಗಾಯಾಳುಗಳನ್ನು ಆಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳಲ್ಲಿ ಪಣಜಿ ಬಳಿಯ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.