ಚೆನ್ನೈ: ಸನಾತನ ಧರ್ಮ ನಿರ್ಮೂಲನೆಯಾಗಬೇಕು ಎಂಬ ಹೇಳಿಕೆ ನೀಡಿದವರ ತಲೆ ಕಡಿದು ತಂದವರಿಗೆ ₹10 ಕೋಟಿ ಕೊಡುವುದಾಗಿ ಹೇಳಿದ್ದ ಉತ್ತರ ಪ್ರದೇಶದ ಪರಮಹಂಸ ಆಚಾರ್ಯ ಅವರ ಕರೆಗೆ ತಿರುಗೇಟು ನೀಡಿರುವ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್, ‘₹10ರ ಬಾಚಣಿಗೆ ತಂದರೆ ಸಾಕು ನನ್ನ ತಲೆ ಬಾಚಬಹುದು’ ಎಂದಿದ್ದಾರೆ.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹೇಳಿಕೆಯನ್ನು ಬೆಂಬಲಿಸಿದ್ದರು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ತಪಸ್ವಿ ಚಾವ್ನಿಯ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯ ಅವರು, ಸ್ಟಾಲಿನ್ ಅವರನ್ನು ಕೊಂದು ತಲೆ ತರುವವರಿಗೆ ₹10 ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಈ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಸ್ಟಾಲಿನ್, ‘ತಮಿಳುನಾಡಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿಯ ಮೊಮ್ಮಗ ನಾನು. ಇಂಥ ಬೆದರಿಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ₹10ರ ಬಾಚಣಿಗೆ ತಂದು ನನ್ನ ತಲೆಯನ್ನು ಬಾಚಿದರೆ ಸಾಕು’ ಲಘು ಹಾಸ್ಯದ ಪ್ರತಿಕ್ರಿಯೆ ನೀಡಿದ್ದಾರೆ.
‘ನಮಗೆ ಇದೇನೂ ಹೊಸತಲ್ಲ. ಇಂಥ ಬೆದರಿಕೆಗಳಿಗೆ ಹೆದರುವವರೂ ನಾವಲ್ಲ. ತಮಿಳಿಗಾಗಿ ನನ್ನ ಅಜ್ಜ ರೈಲಿನ ಗಾಲಿಗೆ ತಲೆ ಕೊಟ್ಟವರು’ ಎಂದು ತಮ್ಮ ಕುಟುಂಬದ ತ್ಯಾಗದ ಹಿನ್ನೆಲೆಯನ್ನು ವಿವರಿಸಿದ್ದಾರೆ.
ಉದಯನಿಧಿ ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಮಗ ಹಾಗೂ ದಿವಂಗತ ಎಂ.ಕರುಣಾನಿಧಿ ಅವರ ಮೊಮ್ಮಗ. ಇತ್ತೀಚೆಗೆ ನಡೆದಿದ್ದ ಸಾಹಿತಿಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸನಾತನ ಧರ್ಮ ಎಂಬುದು ಮಲೇರಿಯಾ ಹಾಗೂ ಡೇಂಗಿ ಇದ್ದಂತೆ. ಇದನ್ನು ನಿರ್ಮೂಲನೆ ಮಾಡಬೇಕು’ ಎಂದಿದ್ದರು ಎಂಬುದು ವಿವಾದಕ್ಕೆ ಕಾರಣವಾಗಿತ್ತು.
ಈ ಹೇಳಿಕೆ ದೇಶದ್ರೋಹಕ್ಕೆ ಸಮ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಈ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿತ್ತು. ಕಾಂಗ್ರೆಸ್‌ನಲ್ಲಿ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
ತಮ್ಮ ವಿರುದ್ಧ ಕೇಳಿಬಂದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಉದಯನಿಧಿ, ‘ಬಿಜೆಪಿ ನಾಯಕರ ಹೇಳಿಕೆ ಸುಳ್ಳು ಸುದ್ದಿ ಇದ್ದಂತೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರೆ ನೀಡಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ನಾಯಕರ ಕೊಲೆಗೆ ಅವರು ನೀಡಿದ ಹೇಳಿಕೆಯೇ?‘ ಎಂದು ಪ್ರಶ್ನಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
‘ನಾವು ತತ್ವಗಳ ಕುರಿತು ಮಾತನಾಡುತ್ತಿದ್ದೇವೆ. ಸನಾತನ ಧರ್ಮ ಎಂದರೆ ಏನು? ಶಾಶ್ವತ ಮತ್ತು ಬದಲಾಗದ್ದು ಎಂಬ ವಿವರಣೆ ಇದೆ. ನಮ್ಮ ದ್ರಾವಿಡ ಮಾದರಿಯಲ್ಲಿ ಪ್ರತಿಯೊಂದರಲ್ಲೂ ಬದಲಾವಣೆ ಕಾಣುವುದಾಗಿದೆ. ಕೆಲ ವರ್ಷಗಳ ಹಿಂದೆ. ಮಹಿಳೆಯರು ವಿದ್ಯೆ ಕಲಿಯಬಾರದು ಎಂದು ಅವರು ಹೇಳಿದ್ದರು. ತಮ್ಮ ದೇಹದ ಮೇಲ್ಭಾಗವನ್ನು ಮಹಿಳೆಯರು ವಸ್ತ್ರದಿಂದ ಮುಚ್ಚಬಾರದು ಎಂದಿದ್ದರು. ದೇವಾಲಯದೊಳಗೆ ಪ್ರವೇಶಿಸಬಾರದು ಎಂದೂ ಹೇಳಿದ್ದರು. ನಾವು ಅವುಗಳನ್ನು ಬದಲಿಸಿದ್ದೇವೆ. ಇದು ದ್ರಾವಿಡ ಮಾದರಿ’ ಎಂದು ಸ್ಟಾಲಿನ್ ಹೇಳಿದ್ದಾರೆ.
ಪೆರಿಯಾರ್ ಅವರ ವಿಚಾರವಾದಿ ತತ್ವಗಳ ಮೇಲೆ ಸ್ಥಾಪಿತವಾದ ಡಿಎಂಕೆ ಪಕ್ಷವು, ದಶಕಗಳಿಂದ ಸನಾತನ ಧರ್ಮವನ್ನು ವಿರೋಧಿಸಿದೆ. ಸನಾತನ ಧರ್ಮದ ಅನುಯಾಯಿಗಳ ಜಾತಿಯ ಆಧಾರದ ಮೇಲಿನ ದಬ್ಬಾಳಿಕೆಗೆ ಹಲವರು ಒಳಗಾಗಿದ್ದಾರೆ. ಸಮಾನತೆ, ಶಿಕ್ಷಣ ಮತ್ತು ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಸತಿ ಸೇರಿದಂತೆ ಮಹಿಳೆಯರ ವಿರುದ್ಧ ಹಲವು ರೀತಿಯ ದೌರ್ಜನ್ಯ ಎಸಗಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.